''ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ" - ಇದು ರಾಷ್ಟ್ರಕವಿ, ಮಹಾಕವಿ ಕುವೆಂಪು ಅವರು ರಚಿಸಿದ ಗೀತೆಯ ಮೊದಲ ಸಾಲುಗಳು. ನಾವು ಎಲ್ಲೇ ಹೋದರು, ಎಲ್ಲೇ ಇದ್ದರು, ಯಾವತ್ತಿಗೂ ಕೂಡ ಕನ್ನಡವನ್ನು ಬಿಟ್ಟು
ಕೊಡಬಾರದು ಎಂಬುದನ್ನು ಈ ಸಾಲು ಒತ್ತಿ ಹೇಳುತ್ತದೆ. ಕೇವಲ ಭಾಷೆಯಾಗದೆ ಭಾವನೆಯೂ ಆಗಿದೆ ಕನ್ನಡ.
ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು ಮೈಸೂರು ರಾಜ್ಯ ಎಂದು. 1950 ರಲ್ಲಿ ಭಾರತವು ಗಣರಾಜ್ಯವಾಯಿತು. ಆ ಬಳಿಕ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ರಾಜ್ಯಗಳು ರಚನೆಯಾಗಲು ಆರಂಭವಾಯಿತು. ಅಂತೆಯೇ 1956ರ ನವೆಂಬರ್ 1ರಂದು ವಿವಿಧ ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಿದ್ದ ಜನರನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯಾಯಿತು. 1973ರ ನವೆಂಬರ್ 1ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ತುಂಬಾ ಸುಲಭವಾಗಿ ಕನ್ನಡಿರನ್ನು ಒಂದುಗೂಡಿಸಿ ಕರ್ನಾಟಕ ರಾಜ್ಯ ರಚನೆಯಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಎಷ್ಟೋ ವರ್ಷಗಳ ಮೊದಲೇ ಹೋರಾಟ ಶುರುವಾಗಿತ್ತು. 1890ರಲ್ಲಿ ಧಾರವಾಡದಲ್ಲಿ ಆರ್.ಎಚ್.ದೇಶಪಾಂಡೆ ಅವರು ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ರಚಿಸಿದ್ದರು. 1905 ರಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು 1956ರಲ್ಲಿ ಒಂದು ಗೂಡಿಸಲಾಯಿತು. ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ ಎನ್ ಕೃಷ್ಣ ರಾವ್ ಮತ್ತು ಬಿ ಎಂ ಶ್ರೀ ಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಕನ್ನಡ ಎಂದಾಕ್ಷಣ ಇವರ ಹೆಸರುಗಳನ್ನು ನಾವು ಎಂದಿಗೂ ಸ್ಮರಿಸಲೇಬೇಕು. ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ ನವೆಂಬರ್ 1, 1973 ರಂದು ಮೈಸೂರು ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಈ ನಿರ್ಧಾರ ತೆಗೆದುಕೊಳ್ಳುವಾಗ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳಿತ್ತು. ಇದೀಗ ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ.ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯ, ಬೇರೆ ದೇಶಗಳಲ್ಲಿರುವ ಕನ್ನಡಿಗರು ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.
ನಮ್ಮ ಕರ್ನಾಟಕವನ್ನು ಕನ್ನಡ ನಾಡು, ಕರುನಾಡು, ಶ್ರೀ ಗಂಧದ ನಾಡು ಎಂದೂ ಕರೆಯಲಾಗುತ್ತದೆ. ನಮ್ಮ ನಾಡ ದೇವಿ ಭುವನೇಶ್ವರಿ. ಕುವೆಂಪು ರಚನೆಯ 'ಜಯ ಭಾರತ ಜನನೀಯ ತನುಜಾತೆ. ಜಯಹೇ ಕರ್ನಾಟಕ ಮಾತೆ' ಗೀತೆಯು ನಮ್ಮ ನಾಡ ಗೀತೆಯಾಗಿದೆ. ನಮ್ಮ ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದೆ. ಕನ್ನಡ ಹೋರಾಟಗಾರ ಎಂ ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣದಿಂದ ಕೂಡಿದ ಬಾವುಟವನ್ನು ಸಿದ್ದ ಪಡಿದ್ದರು. ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ. ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ಕನ್ನಡಾಂಬೆ ಭುವನೇಶ್ವರಿಯ ಅರಿಶಿನ-ಕುಂಕುಮದ ಸಂಕೇತವೂ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ. ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ. ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಸಿದಂತೆ ಆಗುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಬಿಟ್ಟು ಕೊಡಬಾರದು. ಬೇರೆ ಭಾಷೆಗಳನ್ನು ಕಲಿಯುವುದು ಖಂಡಿತ ತಪ್ಪಲ್ಲ. ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ನಮ್ಮ ನೆಲ, ಜಲ, ಭಾಷೆ ಉಳಿವಿಗಾಗಿ ಪಣ ತೊಡಬೇಕಾಗಿದೆ.
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಚೇತನಾ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ