- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಅಕ್ಟೋಬರ್ 25, 2024

 ಸ್ವಾದಿ ಅರಸು ಮನೆತನದತ್ತ ಒಂದು ಅವಲೋಕನ


ಪ್ರಸ್ತಾವನೆ :


ಕರ್ನಾಟಕದ ಇತಿಹಾಸದಲ್ಲಿ ಸಾಮ್ರಾಜ್ಯವನ್ನು ಕಟ್ಟಿ ಆಳಿ ಬಾಳಿ ಬೆಳಗಿದ ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರದಂತಹ ಅರಸುಮನೆತನಗಳ ಕುರಿತಾಗಿ ಸಾಕಷ್ಟು ವಿವರಗಳು ದೊರೆಯುತ್ತವೆ. ಈ ದಿಸೆಯಲ್ಲಿ ಹೋಲಿಸಿದಾಗ ಸ್ವಾದಿ ಅರಸುಮನೆತನಗಳ ಕುರಿತಾಗಿ ದೊರೆಯುವ ಮಾಹಿತಿಗಳು ಸ್ವಲ್ಪ ಕಡಿಮೆಯೇ ಎಂದು ಅನಿಸುತ್ತದೆ. ಇತಿಹಾಸ ದಾಖಲಿಸಿದ ಮಾಹಿತಿಗಳು, ವಿವಿಧ ಮೂಲಗಳಿಂದ ದೊರೆಯುತ್ತಿರುವ ಕೆಲವು ವಿವರಗಳು: ಈ ಮನೆತನದ ಘನತೆಯನ್ನು ಘಂಟಾಘೋಷವಾಗಿ ಸಾರುತ್ತಲಿವೆ. ಇತಿಹಾಸಕಾರರು ದಾಖಲಿಸಿದಂತೆ ಕ್ರಿ.. ಶ. 16 ನೆಯ ಶತಮಾನಕ್ಕೆ ಮೊದಲು ಸ್ವಾದಿ ಬೀಳಗಿ ಪ್ರದೇಶಗಳು ಕದಂಬ ವಂಶದ ಜೈನಪಾಳೆಯಗಾರರಿಗೆ ಸೇರಿ ಅವರ ಆಡಳಿತದಲ್ಲಿತ್ತು. ನಂತರ ಕ್ರಿ.ಶ. 1530 ರಿಂದ 1763 ರ ವರೆಗೆ ಸೋಂದಾ ಏಳು ಜನ ಸ್ವಾದಿ ಅರಸರಿಂದ ಆಳ್ವಿಕೆಗೆ ಒಳಪಟ್ಟಿತ್ತು ಎನ್ನುವುದು ಇತಿಹಾಸದ ತಿರುಳು, ಇಂದಿನ ಸೋಂದಾ (ಸ್ವಾದಿ) ಅಂದಿನ ದಿನಗಳಲ್ಲಿ ಸುಧಾಪುರಿ, ಸೋದಾಭಿದಾನನಗರ, ಸ್ವಾದಿ ಎಂದೆಲ್ಲ ಪ್ರಸಿದ್ದಿ ಪಡೆದಿತ್ತು. ಅಂದಿನ ವೈಭವದ ದಿನಗಳಲ್ಲಿ ಈ ಸಾಮ್ರಾಜ್ಯ ಇಂದಿನ ಶಿರಸಿ, ಹಳಿಯಾಳ, ಜೊಯಡಾ, ಅಂಕೋಲಾ, ಕಾರವಾರ, ಕುಮಟಾ ಮತ್ತು ಈಗಿನ ದಕ್ಷಿಣ ಗೋವಾದ ಕಾಣಕೋಣ, ಕೆಪೆಮ್, ಸಾಂಗೆ ತಾಲೂಕುಗಳ ಪ್ರದೇಶಗಳಲ್ಲಿ ವ್ಯಾಪಿಸಿತ್ತು. ಈ ಮನೆತನ ನಡೆದು ಬಂದ ದಾರಿಯನ್ನು ಅವಲೋಕಿಸುವಾಗ ಪ್ರಚಲಿತದಲ್ಲಿರುವ ಹೆಸರೇ ಶ್ರೀ ಅರಸಪ್ಪ ನಾಯಕ.


ಇತಿಹಾಸ:

ಸೋಧೆ ಅಥವಾ ಸೋಂದಾ ಸಾಮ್ರಾಜ್ಯವನ್ನು 1555 ರಲ್ಲಿ ಜೈನ ಮುಖ್ಯಸ್ಥ ಅರಸಪ್ಪ ನಾಯಕ (1555-1598) ಸ್ಥಾಪಿಸಿದರು. ಸೋಂದಾವನ್ನು ಇನ್ನೂರು ವರ್ಷಗಳ ಕಾಲ (1555-1763) ಸೋಂದಾ ನಾಯಕರು ಆಳಿದರು. 1565 ರಲ್ಲಿ ವಿಜಯನಗರವು ಆದಿಲ್ ಶಾಹಿಗಳ ವಶವಾಗುವವರೆಗೆ ಅರಸಪ್ಪ ನಾಯಕ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿದ್ದನು. ಅವನು 1598 ರಲ್ಲಿ ಸಾಯುವವರೆಗೂ ಆದಿಲ್ ಷಾನ ಅಧೀನ ಆಡಳಿತಗಾರನಾಗಿ ಮುಂದುವರೆದನು. ಅರಸಪ್ಪ ನಾಯಕನು ಸೋಂದಾದಲ್ಲಿ ವಾದಿರಾಜ ಮಠವನ್ನು ಸ್ಥಾಪಿಸಿದನು, ಅದು ಇನ್ನೂ ಅಸ್ತಿತ್ವದಲ್ಲಿದೆ. ಶಿವಾಜಿ, ಮರಾಠ ಚಕ್ರವರ್ತಿ 1674 ರಲ್ಲಿ ಸೋಂದಾವನ್ನು ವಶಪಡಿಸಿಕೊಂಡರು ಮತ್ತು ಅದನ್ನು ಸೋಂದಾ ದೊರೆ ಸದಾಶಿವ ನಾಯಕನಿಗೆ ಹಿಂದಿರುಗಿಸಿದರು. ಮೈಸೂರು ಸುಲ್ತಾನ ಹೈದ‌ರ್ ಅಲಿ 1763 ರಲ್ಲಿ ಸೋಂದಾ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ನಾಶಪಡಿಸಿದನು. ಸೋಂದಾದ ಕೊನೆಯ ಮುಖ್ಯಸ್ಥ ಇಮ್ಮೋಡಿ ಸದಾಶಿವರಾಯರು ಪೋರ್ಚುಗೀಸ್ ಗೋವಾಕ್ಕೆ ಪಲಾಯನ ಮಾಡಿದರು. ಸೋಂದಾವನ್ನು ರಕ್ಷಿಸುತ್ತಿದ್ದ ಕೋಟೆಯ ಅವಶೇಷಗಳು ಪೊದೆಗಳ ಬೆಳವಣಿಗೆಯಿಂದ ಆವೃತವಾಗಿವೆ. ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾದ ಪ್ರಕಾರ, ಐದು ಕೆತ್ತಿದ ಕಂಬಗಳು, ಸರಿಸುಮಾರು 3 ಅಡಿ ಎತ್ತರದ ಸೋಂದಾ ಅರಮನೆಯ ಅವಶೇಷಗಳಾಗಿವೆ. 


ಜೈನ ಮಠಗಳು, (ಸ್ವಾಧಿ ಜೈನ ಮಠ) ಮತ್ತು ದಿಗಂಬರ ಜೈನ ದೇವಾಲಯಗಳು ಸಹ ಸೋಧೆಯಲ್ಲಿವೆ. 

ಈ ಗ್ರಾಮವು ಶ್ರೀ ಸೋದೆ ವಾದಿರಾಜ ಮಠ ಎಂದು ಕರೆಯಲ್ಪಡುವ ಸೋದೆ ಮಠದ ಪ್ರಧಾನ ಕಛೇರಿಯಾಗಿರುವುದರಿಂದ ವಿಶೇಷವಾಗಿದೆ. ಸೋದೆ ಮಠವು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳ ಭಾಗವಾಗಿದೆ. 


ಸ್ವಾದಿ ಅರಸರ ಮಹತ್ವದ ಕೊಡುಗೆಗಳು


ಒಟ್ಟಾರೆ ಈ ಅರಸುಮನೆತನ ಅನೇಕ ಏಳುಬೀಳುಗಳನ್ನು ಕಂಡರೂ ಶೂರತನ, ರಾಜಕೀಯ ಚಾಣಾಕ್ಷತೆ, ರಾಜ್ಯದ ಅಭಿವೃದ್ಧಿ, ವಿಶಾಲ ಧಾರ್ಮಿಕ ದೃಷ್ಟಿ, ಕಾವ್ಯ ಶಿಲ್ಪ ಕಲೆಗಳ ಪೋಷಣೆ, ಪ್ರಜಾನುರಾಗ, ಬಲಾಡ್ಯ ರಾಜಕೀಯ ಶಕ್ತಿಗಳೊಡನೆ ಸ್ನೇಹ, ಅಸ್ತಿತ್ವದ ಪ್ರಶ್ನೆ ಎದುರಾದಾಗ ಕೆಚ್ಚೆದೆಯ ಹೋರಾಟ, ಪರಂಪರಾಗತ ಕೊಡುಗೆಗಳು ಇತ್ಯಾದಿಗಳಿಂದ ಕೀರ್ತಿಶಾಲಿಯಾಗಿ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದು ಅಸ್ತಂಗತವಾಯಿತು. ಬನವಾಸಿಯ ಮಧುಕೇಶ್ವರ ಸ್ವಾಮಿ, ಇವರ ಕುಲದೇವ ಇಷ್ಟದೇವತೆಯಾಗಿದ್ದ ಕಾರಣ ಇದರ ಅಭಿವೃದ್ಧಿಗೆ ದತ್ತಿ ನೀಡಿ ಪುರಸ್ಕರಿಸಿದ್ದರು. ಜೊತೆಗೆ ನಿತ್ಯಪೂಜೆ, ರಥೋತ್ಸವ ಹಾಗೂ ಕಾಲಕಾಲಕ್ಕೆ ವಿಶೇಷ ಉತ್ಸವಗಳು ವಿಜೃಂಭಣೆಯಿಂದ ನಡೆಯುವಂತೆ ನೋಡಿಕೊಂಡಿದ್ದರು. ಸ್ವಾದಿಯಲ್ಲಿ ಜೈನಮಠ, ಸ್ವರ್ಣವಲ್ಲಿ ಮಠ, ಮಹಾಂತೇರ ಮಠ, ವಾದಿರಾಜ ಮಠ, ಗದ್ದಿಗೆ ಮಠ ಇವುಗಳನ್ನೆಲ್ಲಾ ಕಾಣುವಾಗ ಇಂದಿಗೂ ಬನವಾಸಿಯ ಮಧುಕೇಶ್ವರ ದೇವಾಲಯ, ಕಲ್ಲಿನ ಮಂಚ, ಬಸವಣ್ಣ, ಕಲ್ಲಿನಲ್ಲಿ ಕೊರೆದ ಆಸನಗಳು ಅವರ ಘನತೆಗೆ ಸಾಕ್ಷಿಯಾಗಿ ನಿಂತಿವೆ. ಅರಸಪ್ಪ ನಾಯಕನಿಂದ ಮೊದಲ್ಗೊಂಡು ಈ ಮನೆತನದ ಎಲ್ಲ ಅರಸರೂ ವಿಶಾಲ ಧಾರ್ಮಿಕ ದೃಷ್ಟಿಯನ್ನು ಹೊಂದಿದವರಾದ ಕಾರಣ ಹವ್ಯಕ, ವೈಷ್ಣವ, ಜೈನ ಮತ್ತು ವೀರಶೈವ ಮಠಗಳಿಗೆ ಭಕ್ತಿಯಿಂದ ನಡೆದುಕೊಂಡು ಇವುಗಳನ್ನು ಪೋಷಿಸುತ್ತಾ ಬಂದಿದ್ದರು. ಸ್ವಾದಿಯ ಶಾಲ್ಮಲಾ ತೀರಕ್ಕೆ ಹೊಂದಿಕೊಂಡಿರುವ ಕೋಟೆ ಅಲ್ಲಿಯ ರಾಟಾಳ ಬಾವಿ, ಕಲ್ಲುಮಂಚ, ಹನುಮಂತನ ಮತ್ತು ಈಶ್ವರನ ದೇವಾಲಯ, ಪಿರಂಗಿ, ಆನೆಕಟ್ಟುವ ಕಂಬ, ದೋಣಿಗಳು ಗತಕಾಲದ ಪಳೆಯುಳಿಕೆಯಂತೆ ಉಳಿದು ಅಂದಿನ ಅವರ ಕೊಡುಗೆಗಳನ್ನು ನೆನಪಿಸುವಂತಿದೆ. ಸ್ವಾದಿಯ ಆಸುಪಾಸಿನಲ್ಲಿರುವ ಮುತ್ತಿನಕೆರೆ, ಹಳೆಯೂರು ದೇವಸ್ಥಾನ ಹುಳಿಸೆಹೊಂಡದಲ್ಲಿರುವ ವೆಂಕಟರಮಣ ದೇವಾಲಯ ಸ್ವಾದಿಯ ಹತ್ತಿರದಲ್ಲಿ ಇರುವ ಸಹಸ್ರಲಿಂಗ (ಬಂಡೇ ಬಸಪ್ಪನ ಹೊಳೆ) ಇತ್ಯಾದಿಗಳು ಪ್ರವಾಸಿಗರನ್ನು ಕೈಬೀಸಿ ಕರೆದು ಗತಕಾಲದ ವೈಭವದ ಕಥೆಯನ್ನು ಹೇಳುತ್ತಿವೆ. ಸದಾಶಿವ ಗಡದ ಕೋಟೆ, ಹಳಿಯಾಳದ ಹತ್ತಿರದ ಸಾಂಬ್ರಾಣಿಯ ಹಳೆಯ ಕೋಟೆಯ ಗೋಡೆ, ಕದ್ರಾದಲ್ಲಿ ದೊರೆಯುವ ಕೆಲವು ಪಳೆಯುಳಿಗಳು ಜೊತೆಗೆ ಸ್ವಾದಿಯ ಸುತ್ತಮುತ್ತ ಅರಣ್ಯಗಳಲ್ಲಿ ಹಾಗೂ ಕೃಷಿ ಜಮೀನುಗಳಲ್ಲಿ ಸಹಾ ಅಂದಿನ ಜನ ಜೀವನದ ಕೆಲವು ಕುರುಹುಗಳು ಭೂಮಿಯನ್ನು ಅಗೆದಾಗ ದೊರೆಯುತ್ತಿರುವುದು ಗತಕಾಲದ ವೈಭವವನ್ನು ಸಾದರಪಡಿಸುವ ದ್ಯೋತಕಗಳಾಗಿವೆ.



ಸೋಂದಾ ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು


ಧಾರ್ಮಿಕ ಶ್ರದ್ಧಾ ಕೇಂದ್ರಗಳು :


1. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ  


2. ಶ್ರೀ ಸೋದೆ ವಾದಿರಾಜ ಮಠ


3. ಶ್ರೀ ಜೈನ ಮಠ


4. ಶ್ರೀ ಮಹಂತ್ರೀ ಮಠ


ಪ್ರಾಚೀನ ದೇವಾಲಯಗಳು :


1. ಶ್ರೀ ಪೇಟೆ ವೆಂಕಟರಮಣ ದೇವಸ್ಥಾನ, ಹುಲಸೆ ಹೊಂಡ


2. ಹಳೆಯೂರು ಶ್ರೀ ಶಂಕರ - ನಾರಾಯಣ ದೇವಸ್ಥಾನ


3. ಮುತ್ತಿನಕೆರೆ ಶ್ರೀ ವೆಂಕಟರಮಣ ದೇವಸ್ಥಾನ


4. ಕೋಟೆ ಹನುಮಂತ ದೇವಸ್ಥಾನ (ವಾದಿರಾಜ ಮಠದ ಹತ್ತಿರ)


5. ಶ್ರೀ ರಾಮಚಂದ್ರ ದೇವಸ್ಥಾನ, ತೇರಬೀದಿ


6. ಶ್ರೀ ಸದಾಶಿವ ಮತ್ತು ಮಾರಿಕಾಂಬಾ ದೇವಸ್ಥಾನ


7. ವಡ್ಡ ಶ್ರೀ ಗಣಪತಿ ದೇವಸ್ಥಾನ (ಕಟ್ಟೆಮನೆ)


8. ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಹುಲೇಕಲ್


ಐತಿಹಾಸಿಕ ಸ್ಥಳ :


1. ಕೋಟೆ, ಸುಧಾಪುರ, ಅರಸರ ಕಾಲದ ರಾಜಧಾನಿ. ಸ್ಥಳ : (ಬೃಹತ್ ಕಲ್ಲಿನ ಮಂಚ, ಬೃಹತ್ ಫಿರಂಗಿಗಳು ಇರುವ ಸ್ಥಳ)


2. ಬೃಹತ್ ಕಲ್ಲಿನ ದೋಣಿ (ಖಾಸಾಪಾಲ ಶಾಲೆ ಎದುರು)   


3. ಸಹಸ್ರಲಿಂಗ


4. ಗದ್ದಿಗೆ ಮನೆ ( ಕರಿ ಕಲ್ಲಿನಲ್ಲಿ ಕಟ್ಟಿದ ಬೃಹತ್ ಕಟ್ಟಡ)


5. ಜೈನ ಬಸದಿ



ಶಕ್ತಿ ಸ್ಥಳಗಳು :


1. ತಪೋವನ (ಶ್ರೀ ವಾದಿರಾಜರು ತಪಸ್ಸು ಮಾಡಿದ ಸ್ಥಳ )


2. ಅಕಲಂಕರ ನಿಷಿಧಿಗಳು (ಮೂಲ ಸಮಾಧಿ )


3. ಕಾಳಮ್ಮನ ಗುಡಿ.


ಪ್ರೇಕ್ಷಣೀಯ ಸ್ಥಳಗಳು :


1. ಹಯಗ್ರೀವ ಸಮುದ್ರ (ವಾದಿರಾಜ ಮಠ)


2. ಪಕ್ಷಿಧಾಮ (ಮುಂಡಿಗೆ ಕೆರೆ)


3. ಸಸ್ಯಲೋಕ (ಸ್ವರ್ಣವಲ್ಲೀ ಮಠ)


4. ಮುತ್ತಿನಕೆರೆ


5. ಒನಕೆ ತೂಬು (ಮುಂಡಿಗೆರೆ)


6. ಗಣೇಶ ಫಾಲ್ಸ್ (ಶಿವಗಂಗಾ ಜಲಪಾತ) ಹಾಗೂ ಇನ್ನೂ ಹಲವು........


           

             ತಿವಿಕ್ರಮ ಗ ಭಂಡಾರಿ 

             ಪತ್ರಿಕೋದ್ಯಮ ವಿಭಾಗ 

             ಎಂ ಎಂ ಆರ್ಟ್ಸ & ಸೈನ್ಸ್ ಕಾಲೇಜ್ ಶಿರಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ