ಭೂಮಿ ಹುಣ್ಣಿಮೆ
ಶೀಗೆ ಹುಣ್ಣಿಮೆ ಅಥವಾ ಭೂಮಿ ಪೂಜೆಯನ್ನು ಆಶ್ವೀಜ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಮಲೆನಾಡಿನ ರೈತರು ಆಚರಿಸುವ ಒಂದು ವಿಶೇಷ ಹಬ್ಬವಾಗಿದೆ. ಈ ಹಬ್ಬದ ದಿನದಂದು ಭೂತಾಯಿಯನ್ನು ಗರ್ಭಿಣಿ ಎಂದು ಭಾವಿಸಿ ಸೀಮಂತ ಮಾಡಲಾಗುತ್ತದೆಂಬುದು ಹಳೆಕಾಲದ ಸಂಪ್ರದಾಯ.
ರೈತನೇ ದೇಶದ ಬೆನ್ನೆಲುಬು ಎಂಬ ಗಾದೆಮಾತಿದೆ.ರೈತನಿಗೆ ತನ್ನ ಹೊಲವೇ ಜೀವಾಳವಾಗಿರುತ್ತದೆ. ತಾವು ಬೆಳೆದ ಬೆಳೆಗೆ ಒಳ್ಳೆಯ ಫಸಲು ಬರಲಿ ಎಂದು ಭೂ ತಾಯಿಯಲ್ಲಿ ಪ್ರಾರ್ಥಿಸುತ್ತಾರೆ. ಪ್ರಪಂಚದಲ್ಲಿನ ಪ್ರತಿಯೊಂದು ಜೀವಿಯೂ ಪರಸ್ಪರ ಅವಲಂಬಿತವಾಗಿದೆ. ಹಾಗೆಯೇ ಮಾನವನು ಪ್ರಕೃತಿಗೆ ಅವಲಂಬನೆವಾಗಿದ್ದಾನೆ.
ಈ ಹಬ್ಬ ಹೆಚ್ಚಾಗಿ ಮಲೆನಾಡಿನ ಉತ್ತರ ಕನ್ನಡ ಜಿಲ್ಲೆ,ಶಿವಮೊಗ್ಗ ,ಚಿಕ್ಕಮಗಳೂರು ಕೆಲ ಭಾಗಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕಾಣಸಿಗುವುದು.
ಮಳೆಗಾಲ ಮುಗಿಯುವ ಕೊನೆಯ ಹಂತ ಮತ್ತು ಚಳಿಗಾಲ ಶುರುವಾಗುತ್ತಿದ್ದಂತೆ ಪ್ರಕೃತಿಯ ಮೈಬಣ್ಣ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಆ ಪ್ರಕೃತಿಯ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಅಸಾದ್ಯ. ಭೂತಾಯಿಯ ರೂಪವು ಹಸಿರು ಸೀರೆ ಹೊದ್ದಂತೆ ಕಾಣಲ್ಪಡುತ್ತದೆ. ಮಲೆನಾಡಿನ ಭಾಗದಲ್ಲಿ ಭೂಮಣ್ಣಿ ಹಬ್ಬ , ಭೂಮಿ ಹುಣ್ಣಿಮೆ, ಭೂಮ್ ತವ್ವನ ಹಬ್ಬ ಎಂದೂ ಉತ್ತರ ಕರ್ನಾಟಕದ ಕಡೆ ಸೀಗೆ ಹುಣ್ಣಿಮೆ , ಶೀಗೆ ಹುಣ್ಣಿಮೆ ಎಂದು ಕರೆಯಲಾಗುತ್ತದೆ.
ಭೂಮಿ ಹುಣ್ಣಿಮೆ ಬಂತೆಂದರೆ ಸಾಕು ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸಿಹಿ ಕುಂಬಳಕಾಯಿಗೆ ಬೇಡಿಕೆ ಹೆಚ್ಚು. ಈ ಹಬ್ಬ ಶುರುವಾಗುವುದೇ ಸಿಹಿ ಕುಂಬಳಕಾಯಿ ಕಡುಬಿನಿಂದ ಎಂದು ಹೇಳಿದರೆ ತಪ್ಪಾಗಲಾರದು .ಈ ಹಬ್ಬದಲ್ಲಿ ಉದ್ದಿನವಡೆ ,ಕಜ್ಜಾಯ,ಪಾಯಸ,ರೊಟ್ಟಿ , ಅನ್ನ,ಸಾಂಬಾರ್, ಸಿಹಿ ಕುಂಬಳಕಾಯಿ ಕಡುಬು, ಕರಿಗಡುಬು,ಬಳ್ಳಿಹುಗ್ಗಿ, ಕೇಸರಿಬಾತ್, ಅಕ್ಕಿಹುಗ್ಗಿ, ಹೆಸರುಕಾಳು ಉಂಡೆ, ಮೊಸರು ಬುತ್ತಿ, ಮೂರ್ನಾಲ್ಕು ಬಗೆಯ ಪಲ್ಯಗಳು ,ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ ,ಸಂಡಿಗೆ ಮುಂತಾದ ಖಾದ್ಯಗಳು ವಿಶೇಷ. ಸಿಹಿ ಕುಂಬಳಕಾಯಿ ಕಡುಬಿನ ಹಾಜರಿ ಹಬ್ಬದಲ್ಲಿ ಇರಲೇಬೇಕು.
ಹಬ್ಬದ ದಿನದಂದು ಮನೆಯವರೆಲ್ಲರೂ ಸೇರಿ ಹೊಲಕ್ಕೆ ಹೋಗಿ ತಾಯಿಯನ್ನು ಶೃಂಗರಿಸಿ ಮಾಡಿದ ಎಲ್ಲ ಖಾದ್ಯಗಳನ್ನು ನೈವೇದ್ಯಕ್ಕೆ ಇಡಬೇಕು.ಪೂಜೆ ಪುನಸ್ಕಾರಗಳೆಲ್ಲ ಮುಗಿದ ಬಳಿಕ ನೈವೇದ್ಯಕ್ಕೆ ಇಟ್ಟ ಕಡುಬನ್ನು ಗುಂಡಿ ತೆಗೆದು ಮಣ್ಣಲ್ಲಿ ಅರ್ಪಿಸಿದರೆ ಪೂಜೆ ಸಂಪೂರ್ಣವಾದಂತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ