ವರದಕ್ಷಿಣೆ ಪದ್ಧತಿ
ವರದಕ್ಷಿಣೆ ಪದದ ಅರ್ಥ ಹೀಗಿದೆ "ಮಹಿಳೆಯರು ತನ್ನ ಪತಿಗೆ ತರುವ ಪಾಲು "
ಇಂದು ವರದಕ್ಷಿಣೆ ಪದದ ಅರ್ಥವನ್ನು ನಾವು ನಮ್ಮ ಕೆಟ್ಟ ಪದ್ಧತಿಗಳ ಮುಖಾಂತರ ಅಸಮಂಜಸ ಗೊಳಿಸಿದ್ದೇವೆ. ವರನಿಗೆ ವಧುವಿನ ತಂದೆ ತಾಯಿಗಳು ವರದಕ್ಷಿಣೆ ಕೊಡುವ ಪದ್ದತಿಯು ಒಂದು ಒಳ್ಳೆಯ ಉದ್ದೇಶದಿಂದ ಪ್ರಾರಂಭವಾಯಿತು. ಅದರ ಮುಖ್ಯ ಉದ್ದೇಶ, ಹೊಸದಾಗಿ ಮದುವೆಯಾದ ದಂಪತಿಗಳು ತಮ್ಮ ಮನೆಯನ್ನು ನೆಮ್ಮದಿಯಿಂದ ಹಾಗೂ ಹೆಚ್ಚಿನ ಅನುಕೂಲತೆಯಿಂದ ಪ್ರಾರಂಭಿಸಲಿ ಎಂಬುದಾಗಿತ್ತು. ಆದರೆ ಅದು ವಧುವಿನ ತಂದೆ ತಾಯಿಗಳ ಮನಸ್ಸು ಹಾಗೂ ಸಾಮರ್ಥ್ಯವನ್ನು ಅವಲಂಬಿಸಿತ್ತು. ದುರಾದೃಷ್ಟವಶಾತ್, ಇತ್ತೀಚಿಗೆ ವರದಕ್ಷಿಣೆ ಪದ್ದತಿಯು ಭಯಾನಕ ಪ್ರಮಾಣವನ್ನು ಮುಟ್ಟಿದೆ. ವರದಕ್ಷಿಣೆಯನ್ನು ಸ್ವತಂತ್ರವಾಗಿ ಕೊಟ್ಟು ತೆಗೆದುಕೊಳ್ಳಲಾಗುತ್ತಿದೆ. ಅತ್ಯಂತ ಹೆಚ್ಚು ಹಣ ಕೊಟ್ಟವರಿಗೆ ಅವರು ಮಾರಾಟವಾಗುತ್ತಿದ್ದಾರೆ. ಮದುವೆಯ ಸಂತೆಯಲ್ಲಿ ಹುಡುಗಿಯರು ದನಕರುಗಳಂತೆ ವ್ಯಾಪಾರಿ ವಸ್ತುಗಳಾಗುತ್ತಿದ್ದಾರೆ. ಅವರ ಯಾವುದೇ ಸಹಜ ಬುದ್ಧಿ ಶಕ್ತಿ, ವಿದ್ಯಾಭ್ಯಾಸ ಹಾಗೂ ಪಾಂಡಿತ್ಯಕ್ಕೆ ಯಾವುದೇ ಬೆಲೆಯಿಲ್ಲವಾಗಿದೆ. ಹುಡುಗಿಯರ ಬಡ ತಂದೆಗಳು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನೇ ತ್ಯಾಗ ಮಾಡಬೇಕಾಗಿದೆ. ಈ ರೀತಿಯಾಗಿ ಹೆಣ್ಣು ಮಗುವಿನ ಜನನ ಅದೃಷ್ಟಹೀನ ತಂದೆಗೆ ಒಂದು ದೊಡ್ಡ ಕಪ್ಪು ಚುಕ್ಕೆಯಾಗಿದೆ.
ಬೇಡಿ, ಸಾಲಮಾಡಿ ಸಾಕಷ್ಟು ವರದಕ್ಷಿಣೆ ಕೊಟ್ಟ ನಂತರವೂ ಬಡ ತಂದೆತಾಯಿಗಳ ಗೋಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಆಸೆ ಬುರುಕ ಅತ್ತೆ ಮಾವಂದಿರು ಹುಡುಗಿಯರನ್ನು ಇನ್ನೂ ಹೆಚ್ಚು ಹೆಚ್ಚು ಹಣ ಆಸ್ತಿ ತರುವಂತೆ ಪೀಡಿಸುತ್ತಾರೆ. ಅವರ ಬೇಡಿಕೆಗಳಿಗೆ ಕೊನೆಯೇ ಇಲ್ಲ. ಕೊನೆಗೆ ಎಷ್ಟೋ ಹುಡುಗಿಯರು ಬೇಜಾರುಗೊಂಡು ಧೈರ್ಯದಿಂದ ಅವರ ಬೇಡಿಕೆಗಳ ವಿರುದ್ಧ ತಮ್ಮ ಧ್ವನೀಯೆತ್ತುತ್ತಾರೆ. ಆದರೆ ಇದರ ಪರಿಣಾಮ ಅತ್ತೆ ಮಾವಂದಿರಿಂದ ಹಿಂಸೆ ಹಾಗೂ ಕೆಲವು ವೇಳೆ ಸುಟ್ಟು ಸಾಯಿಸುವುದು.
ನಾವು ಒಂದು ನಾಗರಿಕ ಸಮಾಜದಲ್ಲಿದ್ದೇವೆಂದು ಹೇಳಿಕೊಳ್ಳುತ್ತೇವೆ. ಆದರೆ ನಾವು ನಮ್ಮ ನೀತಿ ಮತ್ತು ಆದರ್ಶದ ಬಗ್ಗೆ ಜಂಬ ಕೊಚ್ಚಿ ಕೊಳ್ಳುತೇವೆ. ವರದಕ್ಷಿಣೆಯಂತಹ ಕೆಟ್ಟ ಪದ್ಧತಿಗಳ ಬಗ್ಗೆ ನಮಗೆ ನಾವೇ ನಾಚಿಕೆ ಪಟ್ಟುಕೊಳ್ಳಬೇಕು. ನಮ್ಮಲ್ಲಿ ಆತ್ಮ ಸಾಕ್ಷಿಯಾಗಿ ನಾವು ಏಕೆ ಅಂತಹ ಅನಾಗರಿಕ ಪದ್ಧತಿಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಮೊದಲನೆಯದಾಗಿ, ನಾವೆಲ್ಲರೂ ಯಾವುದೇ ರೂಪದಲ್ಲಾದರೂ ವರದಕ್ಷಿಣೆ ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು. ಇಂತಹ ಅಸಹ್ಯಕರ ಪದ್ಧತಿಯಲ್ಲಿ ಭಾಗಿದಾರರಾಗುವುದಕ್ಕಿಂತ ಅವಿವಾಹಿತರಾಗಿಯೇ ಉಳಿಯುವುದು ಮೇಲು. ಎರಡನೆಯದಾಗಿ ನಾವು ತಪ್ಪಿತಸ್ಥರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವರದಕ್ಷಿಣಾ ವಿರೋಧಿ ಕಾನೂನ್ನು ಉಲ್ಲಂಘಿಸಿದವರನ್ನು ಪೋಲೀಸರ ವಶಕ್ಕೆ ಒಪ್ಪಿಸಬೇಕು. ಮಹಿಳಾ ಸಂಘ ಸಂಸ್ಥೆಗಳು ಈ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಈ ದುಷ್ಟ ಪದ್ದತಿಯನ್ನು ನಿರ್ಮೂಲ ಮಾಡುವುದು ಅಸಾಧ್ಯ.
ನಂದಾ ಮಟ್ಟಿಮನಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ