"ಮ್ಯಾನಿಫೆಸ್ಟೇಷನ್"
ಮಾನವನ ಮನಸ್ಸಿಗೆ ಅಪಾರ ಶಕ್ತಿ ಇದೆ. ನಾವು ಏನನ್ನು ಯೋಚಿಸುತ್ತೇವೆಯೋ, ಅದೇ ಆಗುತ್ತದೆ ಎಂಬ ಮಾತು ಸುಳ್ಳಲ್ಲ. ಮ್ಯಾನಿಫ್ಯಸ್ಟೇಶನ್ ಎಂದರೆ ನಮ್ಮ ಆಲೋಚನೆ, ನಂಬಿಕೆ ಮತ್ತು ಭಾವನೆಗಳ ಶಕ್ತಿಯಿಂದ ನಮಗೆ ಬೇಕಾದದ್ದನ್ನು ನಮ್ಮ ಜೀವನಕ್ಕೆ ಆಕರ್ಷಿಸಿಕೊಳ್ಳುವ ಪ್ರಕ್ರಿಯೆ. ಇದು ಕೇವಲ ಒಂದು ಹೊಸ ಟ್ರೆಂಡ್ ಅಲ್ಲ ಬದಲಾಗಿ ಸಾವಿರಾರು ವರ್ಷಗಳಿಂದ ನಮ್ಮ ಋಷಿಗಳು, ಸಂತರು ಹೇಳುತ್ತಾ ಬಂದಿರುವ "ಯಥಾ ಭಾವೋ ತಥಾ ಭವತಿ" ಎಂಬ ತತ್ವವೇ ಆಗಿದೆ. ನೀನು ಏನನ್ನು ಯೋಚಿಸುತ್ತೀಯೋ ಅದೇ ಆಗುತ್ತದೆ ಎಂಬ ಸತ್ಯವನ್ನು ಮ್ಯಾನುಫ್ಯಸ್ಟೇಷನ್ ನಮಗೆ ನೆನಪಿಸುತ್ತದೆ.
ಆಕರ್ಷಣೆಯ ನಿಯಮದ ಪ್ರಕಾರ ಬ್ರಹ್ಮಾಂಡವು ನಾವು ಹೊರ ಸೂಸುವ ಆವರ್ತನಕ್ಕೆ ಪ್ರತಿಕ್ರಿಯಿಸುತ್ತದೆ. ನಾವು ಸಕಾರಾತ್ಮಕವಾಗಿ ಯೋಚಿಸಿದರೆ, ಸಕಾರಾತ್ಮಕ ಘಟನೆಗಳನ್ನು ಆಕರ್ಷಿಸುತ್ತೇವೆ. ನಕಾರಾತ್ಮಕವಾಗಿ ಯೋಚಿಸಿದರೆ ನಕಾರಾತ್ಮಕತೆಯೇ ನಮ್ಮ ಒಳಗೆ ಬರುತ್ತದೆ. ಅದಕ್ಕಾಗಿಯೇ ಮ್ಯಾನಿಫೆಸ್ಟೇಷನ್ನಲ್ಲಿ ಮೊದಲ ಹಂತ ಸ್ಪಷ್ಟ ಉದ್ದೇಶ. ನಮಗೆ ನಿಖರವಾಗಿ ಏನು ಬೇಕು ಎಂದು ತಿಳಿದಿರಬೇಕು. ಉದಾಹರಣೆಗೆ ನನಗೆ ಹಣ ಬೇಕು ಎನ್ನುವುದಕ್ಕಿಂತ ನಾನು ಪ್ರತಿ ತಿಂಗಳು 2 ಲಕ್ಷ ರೂಪಾಯಿ ಸುಲಭವಾಗಿ ಗಳಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿಕೊಳ್ಳಬೇಕು. ಎರಡನೇ ಹಂತ ನಂಬಿಕೆ ಇರಬೇಕು. ಮೂರನೇ ಹಂತ ಭಾವನೆ, ಆ ವಿಷಯ ಈಗಾಗಲೇ ಆಗಿದೆ ಎಂಬಂತೆ ಸಂತೋಷ ಮತ್ತು ಕೃತಜ್ಞತೆಯನ್ನು ಬ್ರಹ್ಮಾಂಡಕ್ಕೆ ತಿಳಿಸಬೇಕು. ಕೊನೆಯದಾಗಿ ಕ್ರಿಯೆ ಕೇವಲ ಕೂತು ಕನಸು ಕಾಣುವುದರಿಂದ ಏನೂ ಆಗುವುದಿಲ್ಲ. ಅವಕಾಶಗಳು ಬಂದಾಗ ಅವುಗಳನ್ನು ಬಳಸಿಕೊಳ್ಳಲು ನಾವು ಸಿದ್ಧರಿರಬೇಕು.
ಮ್ಯಾನಿಫೆಸ್ಟೇಷನ್ ಮಾಡಲು ಹಲವು ಸುಲಭ ವಿಧಾನಗಳಿವೆ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ದೃಢೀಕರಣಗಳನ್ನು ಹೇಳುವುದು ಅತ್ಯಂತ ಶಕ್ತಿಶಾಲಿ ವಿಧಾನ . " ನಾನು ಆರೋಗ್ಯವಂತ , ನಾನು ಶ್ರೀಮಂತ , ನಾನು ಯಶಸ್ವಿ" ಎಂದು ಜೋರಾಗಿ ಹೇಳಿಕೊಳ್ಳುವುದರಿಂದ ನಮ್ಮ ಉಪಪ್ರಜ್ಞೆ ಮನಸ್ಸು ಅದನ್ನು ನಂಬಲು ಆರಂಭಿಸುತ್ತದೆ . ಇನ್ನೊಂದು ವಿಧಾನ ದೃಶ್ಯೀಕರಣ ದಿನಕ್ಕೆ 5-10 ನಿಮಿಷ ಕಣ್ಣು ಮುಚ್ಚಿ , ನಮಗೆ ಬೇಕಾದ ಗುರಿ ಈಡೇರಿದಂತೆ ಕಲ್ಪಿಸಿಕೊಳ್ಳಬೇಕು . ಈ ಸಮಯದಲ್ಲಿ ನಾವು ಹೇಗೆ ಫೀಲ್ ಮಾಡುತ್ತೇವೆ , ಯಾರು ನಮ್ಮ ಜೊತೆ ಇದ್ದಾರೆ, ಎಲ್ಲೆಲ್ಲಿ ಇದ್ದೇವೆ ಎಂಬುದನ್ನು ತುಂಬ ಸ್ಪಷ್ಟವಾಗಿ ನೋಡಬೇಕು. ಜೊತೆಗೆ ಕೃತಜ್ಞತಾ ಡೈರಿ ಬರೆಯುವುದು ತುಂಬ ಮುಖ್ಯ. ನಮ್ಮ ಬಳಿ ಈಗ ಇರುವ ಸಣ್ಣ ವಿಷಯಕ್ಕೂ ಧನ್ಯವಾದ ಹೇಳಿದಾಗ , ಬ್ರಹ್ಮಾಂಡವು ಇನ್ನಷ್ಟು ಕೊಡಲು ಸಿದ್ಧವಾಗುತ್ತದೆ.
ಆದರೆ ಮ್ಯಾನಿಫೆಸ್ಟೇಷನ್ ಮಾಡುವಾಗ ನಾವು 3 ತಪ್ಪುಗಳನ್ನು ಮಾಡಬಾರದು . ಮೊದಲನೆಯದು ಸಂದೇಹ " ಸಿಗುತ್ತದೆಯೋ ಇಲ್ಲವೋ " ಎಂದು ಯೋಚಿಸಬಾರದು . ಎರಡನೆಯದು ಆತಂಕ. ಯಾವಾಗ ಬರುತ್ತದೆ ಎಂದು ದಿನಾ ಚೆಕ್ ಮಾಡುತ್ತಾ ಕೂರಬಾರದು ಬಿಟ್ಟುಬಿಡಬೇಕು. ಮೂರನೆಯದು ಕ್ರಿಯೆ ಇಲ್ಲದಿರುವುದು . ಒಳ್ಳೆಯ ಕೆಲಸ ಬೇಕು ಎಂದು ಮ್ಯಾನಿಫೆಸ್ಟ್ ಮಾಡಿ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಹೇಗೆ ?
ಕೊನೆಯದಾಗಿ ಹೇಳುವುದಾದರೆ , ಮ್ಯಾನಿಫೆಸ್ಟೇಷನ್ ಎಂದರೆ ಮಾಟ ಮಂತ್ರವಲ್ಲ . ಇದು ವಿಜ್ಞಾನ ಮತ್ತು ಆಧ್ಯಾತ್ಮದ ಸಮ್ಮಿಶ್ರಣ . ಇದು ನಮ್ಮ ಮನಸ್ಸನ್ನು ಶಿಸ್ತುಗೊಳಿಸುತ್ತದೆ. ನಮ್ಮ ಗುರಿಯ ಮೇಲೆ ಗಮನ ಇಡಲು ಸಹಾಯ ಮಾಡುತ್ತದೆ. ಮತ್ತು ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. "ನಿನ್ನ ನಂಬಿಕೆಯೇ ನಿನ್ನ ಭವಿಷ್ಯವನ್ನು ನಿರ್ಮಿಸುತ್ತದೆ. " ಆದ್ದರಿಂದ ಇಂದಿನಿಂದಲೇ ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನು ನಂಬಿ,ಒಳ್ಳೆಯದನ್ನು ಮ್ಯಾನಿಫೆಸ್ಟ್ ಮಾಡಿ.
ತಾರಾ .ಗೌಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ