ನನ್ನ ದೇಶ ನನ್ನ ಸಂಸ್ಕೃತಿ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಜುಲೈ 5, 2022

ನನ್ನ ದೇಶ ನನ್ನ ಸಂಸ್ಕೃತಿ

ಪಲ್ಲವಿ ಗೌಡ



          ನನ್ನ ದೇಶ ಭಾರತ. ಭಾರತ ಎಂದಾಗ ಎಲ್ಲರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಹಬ್ಬಗಳು, ಸಂಪ್ರದಾಯ ಹಾಗೂ ಸಂಸ್ಕೃತಿ. ಭಾರತ ಎಂದರೆ ನೆನಪಿಗೆ ಬರುವುದು ವೈವಿಧ್ಯತೆ, ಒಗ್ಗಟ್ಟು. ಸಾವಿರಾರು ವರ್ಷಗಳಿಂದ ಭಾರತ ದೇಶದಾದ್ಯಂತ ಸಾವಿರಾರು ಸಂಸ್ಕೃತಿ, ಭಾಷೆ, ಜಾತಿ- ಉಪಜಾತಿಗಳ ಸಮನ್ವಯದಲ್ಲಿ ಜನರು ಬಾಳ್ವೆ ನಡೆಸುತ್ತಿದ್ದಾರೆ. 


         ಆಹಾರ ಪದ್ಧತಿ, ಮುನ್ನಡೆಸಿಕೊಂಡು ಹೋಗುತ್ತಿರುವ ಹಬ್ಬಗಳು ಹಾಗೂ ಸಂಪ್ರದಾಯಗಳು, ಹಿರಿಯರಿಗೆ ನೀಡುವ ಗೌರವ ಎಲ್ಲಾ ಸಂಸ್ಕೃತಿಯನ್ನೂ ಸಹ ನಮ್ಮ ದೇಶ ಮಾತ್ರವಲ್ಲದೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಮುಂದುವರೆಸಿಕೊಂಡು ಹೋಗುತ್ತಿರುವುದು ನಮ್ಮ ದೇಶದ ಹೆಮ್ಮೆ. ನಮ್ಮ ಭಾರತೀಯರು ಶುಭ ಕೋರುವ ಸಮಯದಲ್ಲಿ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಹೇಳುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಪ್ರಸ್ತುತಪಡಿಸುತ್ತಾರೆ. ಅತಿಥಿ ದೇವೋಭವ ಎಂಬ ಮಾತನ್ನು ಬಲವಾಗಿ ನಂಬುವ ಭಾರತೀಯರು ಮನೆಗೆ ಬಂದ ಅತಿಥಿಗಳಿಗೆ ಉಪಚಾರ ಮಾಡಿ, ಅವರೊಂದಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಾರೆ. ಇಂತಹ ಪದ್ಧತಿ ಬೇರೆ ಯಾವ ದೇಶದಲ್ಲಿಯೂ ಸಹ ನೋಡಲು ಸಿಗಲಾರದು. ಹಿರಿಯರನ್ನು ಗೌರವದಿಂದ ಕಾಣುವ ಭಾರತೀಯರು ಯಾವುದೇ ಶುಭಕಾರ್ಯ ಪ್ರಾರಂಭಿಸುವ ಮೊದಲು ದೇವರ ನಂತರ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ನಮ್ಮ ದೇಶ ಭಾರತದಲ್ಲಿ ಎಲ್ಲಾ ಹಬ್ಬಗಳು ರಜಾದಿನ. ದೀಪಾವಳಿ, ಗಣೇಶ ಚತುರ್ಥಿ, ಯುಗಾದಿ, ಪೊಂಗಲ್, ಓಣಂ, ದಶಮಿ, ಬಕ್ರೀದ್, ರಂಜಾನ್, ಕ್ರಿಸ್ಮಸ್, ಬುದ್ಧ ಜಯಂತಿ ಮುಂತಾದ ಹಬ್ಬಗಳಿಗೆ ರಜೆ ಇದೆ.   

 

             ಭಾರತೀಯ ಮಸಾಲೆ ಪದಾರ್ಥಗಳೇ ಬ್ರಿಟೀಷರನ್ನು ಭಾರತಕ್ಕೆ ಸೆಳೆಯಿತು. ಭಾರತದಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿಗಳಿಬ್ಬರೂ ಮಸಾಲೆ ಪದಾರ್ಥ ಬಳಸದೇ ಅಡುಗೆ ಮಾಡಲಾರರು. ಭಾರತದ ಸಾಂಪ್ರದಾಯಿಕ ಉಡುಗೆ ಸೀರೆ, ದಾವಣಿ, ಧೋತಿ ಮತ್ತು ಕುರ್ತಾ ಮುಂತಾದವು ಪ್ರಮುಖವಾದದ್ದು. ಆದರೆ ಬ್ರಿಟಿಷರ ಆಗಮನದ ನಂತರ ಉಡುಗೆಗಳಲ್ಲಿ ಬದಲಾವಣೆ ಕಂಡಿತು. ಇಂದು ಪಾಶ್ಚಾತ್ಯ ಮತ್ತು ಭಾರತೀಯ ಶೈಲಿಯ ಮಿಶ್ರಣದ ಉಡುಗೆ ಈಗಿನ ಯುವಜನತೆಯ ಅಚ್ಚುಮೆಚ್ಚು. 


          ನಮ್ಮ ಭಾರತ ದೇಶ ವಾಸ್ತುಶಿಲ್ಪಗಳಿಗೆ ಹೆಸರಾಗಿದೆ. ವಿಶ್ವದ ಅಗ್ರಗಣ್ಯ ವಾಸ್ತುಶಿಲ್ಪಗಳಲ್ಲಿ ಪರಿಗಣಿಸಲ್ಪಡುತ್ತದೆ. ತಾಜ್ ಮಹಲ್, ಕುತುಬ್ ಮಿನಾರ್, ಹಂಪಿ,  ಪಟ್ಟದಕಲ್ಲು,  ಕೆಂಪುಕೋಟೆ ಮುಂತಾದವು ಭಾರತೀಯ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿದೆ.  ಕ್ರೀಡಾ ಕ್ಷೇತ್ರದಲ್ಲಿಯೂ ಸಹ ಭಾರತ ದೇಶ ಜನಪ್ರಿಯವಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಆಡುವ ಕಬಡ್ಡಿ ಮತ್ತು ಗಿಲ್ಲಿ - ದಂಡುಗಳು ಸಾಂಪ್ರದಾಯಿಕ ದೇಶೀಯ ಕ್ರೀಡೆಗಳು. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ.   ವಿವಿಧ ಧರ್ಮಗಳು ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿರುವ ಭಾರತೀಯ ಸಂಸ್ಕೃತಿ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೆಯೂ ಪ್ರಭಾವ ಬೀರಿದೆ. 



                            ಪಲ್ಲವಿ ಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ