ಕೆಸರಿನಿಂದ ಹೆಸರಾದ ರೈತ...... - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಜುಲೈ 5, 2022

ಕೆಸರಿನಿಂದ ಹೆಸರಾದ ರೈತ......

ಚಂದ್ರಶೇಖರ್. ಎಂ




ಮಳೆಗಾಲದ ಬರುವಿಕೆಗೆ ಕಾಯುತ್ತಿರುವ ರೈತನಿಗೆ ಮಳೆಯ ಹನಿ ಧರೆಗೆ ಚುಂಬಿಸಿದ ಕ್ಷಣ ಆತನ ಜೀವನದಲ್ಲಿ ಅಷ್ಟೈಶ್ವರ್ಯ ಸಿಕ್ಕ ಭಾಸವಾಗುತ್ತದೆ. ಕಾರಣ ಜೀವನಕ್ಕೆ ಅತ್ಯವಶ್ಯಕವಾದ ಹೊತ್ತಿನ ಕೂಳಿಗೆ ಅನುವು ಮಾಡಿಕೊಡುವ ಘಳಿಗೆ ಇದಾಗಿರುತ್ತದೆ. ನಿಜ, ರೈತನ ಬದುಕಿನಲ್ಲಿ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಮಳೆಗಾಲದ ಆರಂಭದಲ್ಲಿ ಇರುವ ಆತನ ಉತ್ಸಾಹ ಹುರುಪು ಯಾವ ಉದ್ಯಮಿ, ರಾಜಕಾರಣಿಯಲ್ಲಿಯೂ ಕಾಣಸಿಗದು, ಸಿಕ್ಕರೆ ನಮ್ಮ ದೇಶ ರೈತನನ್ನು ಬೆನ್ನೆಲುಬೆಂದು ಕರೆಯುವ ವಾಡಿಕೆ ಮರೆಯುತ್ತಿರಲಿಲ್ಲ. 

   ಮಳೆಗಾಲದಲ್ಲಿ ಹಳ್ಳ ಕೊಳ್ಳ ಗದ್ದೆಬಯಲುಗಳು ತುಂಬಿರುವ ಕ್ಷಣ, ಜೋಪಾನವಾಗಿರಿಸಿದ ನೇಗಿಲು ನೊಗ ಹೊರತೆಗೆದು ಉಳುಮೆಗೆ ಸಿದ್ದವಾಗುತ್ತಾನೆ. ಈಗ ಇದರ ಬಳಕೆ ಕಡಿಮೆಯಾಗಿರಬಹುದು ಯಾಕೆಂದರೆ ಆಧುನಿಕ ತಂತ್ರಜ್ಞಾನದಿಂದ ಡಗ ಡಗ ಸದ್ದು ಮಾಡುವ ಟ್ರಾಕ್ಟರ್ಗಳು ಲಗ್ಗೆಯಿಟ್ಟಿವೆ ನೋಡಿ. ಬಹುಶಃ ಈ ಮುಂದುವರಿಕೆಯಿಂದ ದೇಶದ ಬೆನ್ನೆಲುಬಿಗೆ ಕೊಂಚ ಹೊಡೆತ ಬಿದ್ದಿರಬಹುದು ಎಂದು ನನ್ನ ಅಭಿಪ್ರಾಯ. ಕಾರಣ ಮೈ ಕೈ ಮುರಿದು ದುಡಿಯುವ ರೈತ ಈ ತಂತ್ರಜ್ಞಾನದಿಂದ ಕೊಂಚ ಆಲಸ್ಯದ ಕಡೆಗೆ ವಾಲಿರಬೇಕು ಅನ್ನಿಸುತ್ತಿದೆ. ಇಂಧನ ಹಾಕಿದರಾಯಿತು ಹೇಗೆ ಬೇಕು ಹಾಗೆ ಎಷ್ಟು ಹೊತ್ತು ಬೇಕು ಅಷ್ಟು ಹೊತ್ತು ಉಳುಮೆ ಮಾಡುತ್ತವೆ ಅನ್ನುವ ಭಾವನೆ ರೈತನ ತಲೆಯಲ್ಲಿ ಹೊಕ್ಕಿದೆ.

      ಕೆಸರಿನಿಂದ ಹೆಸರಾದ ರೈತನ ಬದುಕಿನ ಕಡೆ ಗಮನಹರಿಸುವುದಾದರೆ ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದಿನ ರೈತ ಜೀವನದ ಪುಟ ತಿರುವಿ ನೋಡಬೇಕು. ನೇಗಿಲು ನೊಗ ಎರಡೆತ್ತು ಕೋಣಗಳನ್ನು ನಂಬಿರುವಾತ ಬೆಳಿಗ್ಗೆ ಬೇಗ ಹೊರಟರೆ ಬರುವುದು ಮಧ್ಯಾಹ್ನ. ಟ್ರಾಕ್ಟರ್ ತರಹ ಇಡೀ ದಿನ ಉಳುಮೆ ಮಾಡುತ್ತಿರಲಿಲ್ಲ ಯಾಕೆಂದರೆ ಎತ್ತು ಕೊಣಗಳದು ಜೀವವೇ ಅಲ್ಲವೇ. ವಿಶಾಲವಾದ ಬಯಲಿನಲ್ಲಿ ಮಳೆ ಹನಿಗಳ ಅಡಿಯಲ್ಲಿ ಸದ್ದು ಗದ್ದಲವಿಲ್ಲದೆ ತನ್ನ ಕಾರ್ಯವ ಸಂತಸದಿ ಮಾಡುತ್ತಿದ್ದ. ಆದರೀಗ ಪೂರ್ಣ ವಿರುದ್ಧವಾಗಿದೆ ಆ ಕರ್ಕಶ ಶಬ್ದಕ್ಕೆ ತನ್ನ ಕಿವಿಯನೊಡ್ಡಿ, ಅದು ಬಿಡುವ ಹೊಗೆಗೆ ತನ್ನ ಮೂಗನ್ನು ನೀಡಿ ಆರೋಗ್ಯ ವನ್ನು ತನ್ನ ಕೈಯಿಂದ ತಾನೇ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ.

    ಈ ಸಂತಸದ ನಡುವೆ ಅಷ್ಟೇ ಭಯದಿಂದ ಆತ ನಿದ್ರಿಸುವ ಘಳಿಗೆಯೂ ಮಳೆಗಾಲದಲ್ಲೇ. ತಾನು ಬಿತ್ತಿರುವ ಬೀಜ ಮಳೆಯ ತೀವ್ರತೆಯಿಂದ ಕೊಚ್ಚಿ ಹೋಗುವುದೆಂಬ ಚಿಂತೆ ರೈತನಿಗೆ ಇಡೀ ರಾತ್ರಿ ಕಾಡುತ್ತಿರುತ್ತದೆ. ಇಷ್ಟೂ ದಾಟಿ ಹಗಲಲ್ಲಿ ಹಕ್ಕಿ ಹುಳಗಳ ಭಯ. ಒಟ್ಟಿನಲ್ಲಿ ರೈತ ತನ್ನ ಜೀವನದ ಕಷ್ಟ ಸುಖಗಳನ್ನು ಈ ಮಳೆಗಾಲದಲ್ಲಿ ನೋಡುತ್ತಾನೆ. ನಂಬಿರುವ ದೇವರ ಮೊರೆಹೋಗಿ ಸಂಸಾರದ, ದೇಶದ ಹೊಟ್ಟೆ ತುಂಬಿಸುವವವ, ಕೆಸರಿನಿಂದ ಹೆಸರಾದ ರೈತ

                          ಚಂದ್ರಶೇಖರ್. ಎಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ