- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಸೆಪ್ಟೆಂಬರ್ 30, 2025

 ಇಂದಿನ ರಸ್ತೆಯ ಸ್ಥಿತಿಗತಿಗಳು : ಶಿರಸಿ 



ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯನ್ನು ಪಡೆದ ನಮ್ಮ ಶಿರಸಿ ಅರಣ್ಯಗಳ ನಡುವೆ ನೆಲೆಗೊಂಡ ಸುಂದರ ನಗರ. ತಾಯಿ ಮಾರಿಕಾಂಬೆ ಕೃಪೆ ಹೊಂದಿದ ನಾಡು. ಪ್ರಕೃತಿಯ ಸೌಂದರ್ಯ, ಅರಳುವ ಅಣಬೆಯ ತೋಟ, ಮಳೆಯ ಸೊಬಗು, ಭತ್ತ, ತೆಂಗು, ಅಡಿಕೆ ಹೊಂದಿದ ಬೀಡು.  ಆದರೆ, ಇಲ್ಲಿನ ಈ ಶಿರಸಿಯ ಸೊಬಗನ್ನು ಸವಿಯಲು ರಸ್ತೆಗಳು ಅತ್ಯಂತ ಅವಶ್ಯಕ.

                                                         

                      ಇತ್ತೀಚಿನ ದಿನಗಳಲ್ಲಂತೂ ಶಿರಸಿ ತಾಲೂಕಿನ ಕೆಲ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಗುಂಡಿಗಳಿಂದ ತುಂಬಿ ಹೋಗಿರುವ ರಸ್ತೆಗಳು ಮಳೆ ಬಂದ ಕೂಡಲೇ ನೀರಿನಿಂದ ತುಂಬಿಕೊಳ್ಳುತ್ತವೆ. ಇದರಿಂದ ವಾಹನಗಳು ಸಂಚರಿಸಲು ಕಷ್ಟಕರವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ದಿನನಿತ್ಯ ಕೆಲಸಕ್ಕೆ ಹೋಗುವ ಉದ್ಯೋಗಿಗಳು, ರೈತರು ಪ್ರತಿಯೊಬ್ಬರಿಗೂ ಈ ರಸ್ತೆ ಸಮಸ್ಯೆ ಉಂಟಾಗುತ್ತದೆ.

                            

                         ಈ ರಸ್ತೆಯ ಸಮಸ್ಯೆಯಿಂದ ವಾಹನಗಳು ಅಸಮತೋಲನ ತಪ್ಪಿ ಅನೇಕ ಅಪಘಾತಗಳು ಉಂಟಾಗುತ್ತವೆ. ಪ್ರಾಣಹಾನಿ, ಘಾಯಗಳು ಉಂಟಾಗುತ್ತವೆ. ಈ ರಸ್ತೆಗಳಿಗೆ ಮರುಪೂರಣೆಯೇನೋ ಮಾಡುತ್ತಾರೆ. ಆದರೆ ಅದು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಬಿಸಿಲು ಬಂದರೆ ಅರ್ಧಂಬರ್ಧ ರಸ್ತೆ ನಿರ್ಮಾಣದ ಕಾರಣದಿಂದ ವಾಹನಗಳು ಓಡಾಡುವಾಗ ವಿಪರೀತ ಧೂಳು ಉಂಟಾಗುತ್ತದೆ. ರಸ್ತೆ ಸರಿಯಾಗಿ ಕಾಣುವುದಿಲ್ಲ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ನಮ್ಮ ಶಿರಸಿ ರಸ್ತೆಗಳ ದುಸ್ಥಿತಿಯಿಂದ ಪ್ರವಾಸಿಗರಿಗೆ ಕೆಟ್ಟ ಅನುಭವ ನೀಡುತ್ತಿದೆ.

                                  

          ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ, ತಾಂತ್ರಿಕತೆಯನ್ನು ಉಪಯೋಗಿಸಿ ರಸ್ತೆ ನಿರ್ಮಿಸಿದರೆ ಯಾವುದೇ ರಸ್ತೆ ಸಮಸ್ಯೆ ಉಂಟಾಗುವುದಿಲ್ಲ. ರಸ್ತೆ ಕಾಮಗಾರಿಗೆ ಸರ್ಕಾರದಿಂದ ಹಣ ಬರುತ್ತದೆ. ಆದರೆ ಪೂರ್ತಿ ಪ್ರಮಾಣದ ವೆಚ್ಚ ರಸ್ತೆ ಕಾಮಗಾರಿಯವರೆಗೆ ಬಂದು ತಲುಪುವುದಿಲ್ಲ. ಈ ಕಾರಣದಿಂದ ಕಚ್ಚಾ ವಸ್ತುಗಳನ್ನು ಬಳಸಿ ರಸ್ತೆ ನಿರ್ಮಿಸುತ್ತಾರೆ. ಇದರಿಂದ ಅಸಮರ್ಪಕ ಕಾಮಗಾರಿ ನಡೆಯುತ್ತದೆ. ನಿರಂತರ ಮಳೆ, ಸರಿಯಾದ ನಿರ್ವಹಣೆ ಇಲ್ಲದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗುತ್ತಿದೆ.

                                            

                 ನಮ್ಮ ಶಿರಸಿ ಪ್ರಸಿದ್ಧ ಪ್ರವಾಸಿ ತಾಣ, ಪ್ರಕೃತಿಯಿಂದ ಸಿರಿವಂತವಾಗಿದ್ದರೂ , ರಸ್ತೆಗಳ ದುಸ್ಥಿತಿ ಈ ಹೆಗ್ಗಳಿಕೆಗೆ ಮಸಿ ಬಡಿಯುತ್ತಿದೆ. ಪ್ರತಿಯೊಬ್ಬ ರಾಜಕಾರಣಿಗಳು, ಅಧಿಕಾರಿಗಳು, ನಾಗರಿಕರು ರಸ್ತೆ ಸುಧಾರಣೆಯ ಕಡೆಗೆ ಗಮನ ಹರಿಸಿ ಜಾಗೃತಿ ಮೂಡಿಸಿ ರಸ್ತೆ ಸರಿಪಡಿಸಿದರೆ ಸಂಚಾರ ಸರಾಗವಾಗುತ್ತದೆ. ನಮ್ಮ ಶಿರಸಿ ಇನ್ನಷ್ಟು ಅಭಿವೃದ್ಧಿ ಹಾದಿ ಹಿಡಿದು ಪ್ರಸಿದ್ಧಿಯನ್ನು ಪಡೆಯುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ