ನಾ ಕಂಡ ಉತ್ತರಾಕಾಂಡ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಭಾನುವಾರ, ಜುಲೈ 3, 2022

ನಾ ಕಂಡ ಉತ್ತರಾಕಾಂಡ

   -vishakha Bhat

      




ಸುಮಾರು ನಲವತ್ತು ವರ್ಷಗಳ ಹಿಂದೆ ಪರ್ವ ಮೂಲಕ ದ್ರೌಪದಿ, ಕುಂತಿ ಗಾಂಧಾರಿಯನ್ನು ಚಿತ್ರಿಸಿದ್ದ ಎಸ್.ಎಲ್ ಭರಪ್ಪನವರು ಉತ್ತರಾಕಾಂಡದ ಮೂಲಕ ರಾಮ  ಕಥೆಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಉತ್ತರಾಕಾಂಡ ಸಂಪೂರ್ಣ ರಾಮಾಯಣವಲ್ಲ, ಇದು ಸೀತೆಯ ಸ್ವಗತ. ಮೂಲ ರಾಮಾಯಣದಲ್ಲಿ ರಾಮನ ಅಜ್ಞಾವರ್ತಿಯಾಗಿ ಚಲಿಸುವ ಸೀತೆಯ ಪಾತ್ರ ಇಲ್ಲಿ ಸಿಟ್ಟು, ಅಸಹಾಯಕತೆ, ಮೋಹ, ಸ್ವಾಭಿಮಾನವನ್ನು ಮೂಡಿಸಿಕೊಂಡಿದೆ. ಭೈರಪ್ಪನವರು ಸೀತೆಯ ಪಾತ್ರದ ಮೂಲಕ ಸ್ತ್ರೀ ಕುಲದ  ಮೇಲಾದ ಶೋಷಣೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ವಸುಂಧರೆಯ ಮಗಳಾಗಿ ಹುಟ್ಟಿದ ಸೀತಾದೇವಿಯು ಜನಕನ ನಂದಿನಿಯಾಗಿ  ಜಾನಕಿ ಎಂದೆನಿಸಿಕೊಳ್ಳುತ್ತಾಳೆ. ಹುಟ್ಟಿನಿಂದಲೇ ಬಂದ ಕರುಣೆ, ಮಮತೆ, ದಿಟ್ಟತನ, ಮತ್ತು ಜನಕ ರಾಜ ನೀಡಿದ ಸಂಸ್ಕಾರ ಹಾಗೂ ಗುರು ಶತಾನಂದರು ಮತ್ತು ಗುರು ಪತ್ನಿ ಶ್ರೀಲಕ್ಷ್ಮಿಯ ಒಡನಾಟ , ಇವೆಲ್ಲವೂ ಸೀತೆಯ ಮೇಲೆ ಬಹಳಷ್ಟು ಪ್ರಭಾವ ಬೀರುವುದು ಮಾತ್ರವಲ್ಲದೆ, ಅವಳ ವ್ಯಕ್ತಿತ್ವವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ. ಉತ್ತರಾಕಾಂಡದ ಮೂಲಕ ಭೈಪ್ಪನವರು ಹೆಜ್ಜೆ ಹೆಜ್ಜೆಗೂ ಸೀತೆಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ.

ಅಪ್ರತಿಮ ಸೌಂದರ್ಯವತಿಯಾದ ಸೀತೆಯ ಸ್ವಯಂವರಕ್ಕಾಗಿ ಶಿವಧನಸ್ಸನ್ನು ಹೆದೆಗೇರಿಸುವ ಷರತ್ತನ್ನು ಜನಕರಾಜ ವಿಧಿಸಿದಾಗ , ಯಾರೊಬ್ಬರಿಗೂ ಸಾಧ್ಯವಾಗದೆ ಇರುವಂತಹ ಸಂದರ್ಭದಲ್ಲಿ  ತಂದೆ ಜನಕನನ್ನು ಸಮಾಧಾನಪಡಿಸುವ ಗಟ್ಟಿಗಿತ್ತಿ ಅವಳು. ನಂತರ ರಘುವಂಶಿ ಶ್ರೀರಾಮನ ಮಡದಿಯಾಗಿ ರಾಮನಿಗೆ ಪ್ರತಿಯೊಂದು ವಿಷದಲ್ಲೂ ಬೆನ್ನೆಲುಬಾಗಿ ಸ್ಫೂರ್ತಿ ತುಂಬುವ ಅರ್ಧಾಂಗಿ.  ಪಿತೃ ವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೊರಟ ಸ್ವಾಮಿಯನ್ನು ಅನುಸರಿಸಿದ ಪತಿವ್ರತೆ. ರಾಮ ಬ್ರಹ್ಮಚರ್ಯ ವ್ರತ ಮಾಡುವುದರ ಜೊತೆಗೆ ಸೀತೆಯೂ ಬ್ರಹ್ಮಚರ್ಯ ವ್ರತವನ್ನು ಕೈಗೊಂಡು ನಾರು ಮಡಿಯನ್ನುಡಬೇಕು ಎಂಬ ಷರತ್ತನ್ನು ರಾಣಿ ಕೈಕೇಯಿ ವಿದಿಸಿದಾಗ, ಸ್ವಂತ ಸೊಸೆಯನ್ನೇ ಅನುಮಾಸುತ್ತಿರುವೆ ಎಂದು ಕ್ರೋಧ ಉಂಟಾದರೂ  ತಂದೆ ಜನಕನ ಮಾತಿನಂತೆ ಹೆಣ್ಣಿಗೆ ಲಜ್ಜೆಯೇ ಆಭರಣ ಎಂದು ಕ್ರೋಧವನ್ನು ನುಂಗಿಕೊಂಡ ಸಹನಾಶೀಲಳು.

ಭೈರಪ್ಪನವರ ಕಾದಂಬರಿಯಲ್ಲಿ ಯಾವುದೇ ಕಾಲ್ಪನಿಕತೆಗೆ ಅವಕಾಶವಿಲ್ಲ. ಪ್ರತಿಯೊಂದನ್ನು ನೈಜವಾಗಿ ಚಿತ್ರಿಸುವ ಅವರು, ಯಾವುದೇ ದೈವಿಕ ಮತ್ತು ಮಾಯಾವಿ ಶಕ್ತಿಗಳನ್ನು ಇಲ್ಲಿ ಉಲ್ಲೇಖಿಸಿಲ್ಲ. ಅವರ ಕಾದಂಬರಿಯ ನೈಜತೆ ಎಷ್ಟಿದೆ ಎಂದರೆ ವನವಾಸಕ್ಕೆ ಹೊರಡುವ ರಾಮ ಲಕ್ಷ್ಮಣ ಸೀತೆಯರು ಗುದ್ದಲಿ ಕತ್ತಿಯನ್ನು ತೆಗೆದು ಕೊಂಡು ಹೋದರು ಎಂಬುದಾಗಿ ಅವರು ಬರೆಯುತ್ತಾರೆ. ಭೈಪ್ಪನವರು ಈ ಕಾದಂಬರಿಯಲ್ಲಿ ಲಕ್ಷ್ಮಣನ ನೈಜ ಚಿತ್ರಣವನ್ನು ನೀಡುವ ಪ್ರಯ್ನವನ್ನು ಮಾಡಿದ್ದಾರೆ. ಲಕ್ಷ್ಮಣ ಅತ್ಯಂತ ಮೇಧಾವಿ, ಚತುರ ಮತ್ತು ಉತ್ತಮ ಕೃಷಿಕ ಹಾಗೂ ಸ್ವಲ್ಪ ಮುಂಗೋಪಿ. ಪರ್ಣ ಕುಟೀರ ನಿರ್ಮಿಸುವ ಅವನ ಕೌಶಲ್ಯ, ಎಂತಹದೇ ಭೂಮಿಯಲ್ಲೂ ಬೆಳೆ ಬೆಳೆಯುವ ಅವನ ನಿಪುಣತೆ, ಇವೆಲ್ಲವೂ ಲಕ್ಷ್ಮಣನಿಗೆ ಒಂದು ಬೇರೆಯದೇ ಸ್ಥಾನವನ್ನು ನೀಡುತ್ತದೆ. ಮಾಯಾ ಜಿಂಕೆಯ ಬೆನ್ನಟ್ಟಿ ಹೋದ ರಾಮನಿಗೆ ಅಪಾಯವಿದೆ ಎಂದ ಸೀತೆಯ ಮಾತನ್ನು ಧಿಕ್ಕರಿಸಿದ್ದಕ್ಕೆ ಅವಳಿಂದಾದ ಅವಮಾನವನ್ನು ಸಹಿಸಿಕೊಂಡ ಮೌನಿ. ಇಂತವನ ಮೇಲೆ ಓದುಗರಿಗೆ ಒಂದು ವಿಶೇಷ ಭಾವನೆ ಮೂಡುವುದರಲ್ಲಿ ಯಾವುದೇ ಅನುಾನವಿಲ್ಲ. ಇನ್ನು ಉತ್ತರಕಾಂಡದ ರಾಮನ ಬಗ್ಗೆ ನೋಡಿದಾಗ, ಲೇಖಕರು ಇಲ್ಲಿ ರಾಮನ ಬಗ್ಗೆ ಕಟು ಧೋರಣೆಯನ್ನು ಹೊಂದಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಸೂಕ್ಷ್ಮ ಮನಸ್ಸಿನಿಂದ ನೋಡಿದಾಗ, ರಾಮನ ಮೃದುತ್ವ ಅನಾವರಣಗೊಳ್ಳುತ್ತದೆ.ರಾವಣ ವಧೆ ನಂತರ ಸೀತೆಯ ಪವಿತ್ರತೆಯ ಬಗ್ಗೆ ಅನುಮಾನ ಪಟ್ಟು ಅಗ್ನಿಪ್ರವೇಶ ಮಾಡು ಎಂದಾಗ ತನ್ನ ಪ್ರಿಯ ಅನುಜ ಲಕ್ಷ್ಮಣನ ಮಾತನ್ನು ಧಿಕ್ಕರಿಸಿ ಅವಳನ್ನು ಪರೀಕ್ಷೆಗೊಡ್ಡುತ್ತಾನೆ. ನಂತರ ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗಟ್ಟುವ ಸಂದರ್ಭದಲ್ಲೂ ಇದೇ ನಿಲುವನ್ನು ಪ್ರದರ್ಶಿಸುತ್ತಾನೆ. ಉಳಿದೆಲ್ಲ ಪಾತ್ರವನ್ನು ಮೂಲ ರಾಮಾಯಣಕ್ಕಿಂತ ಭಿನ್ನವಾಗಿ ಚಿತ್ರಿಸಿರುವ ಭೈರಪ್ಪನವರು ವಾಲ್ಮೀಕಿ ರಾಮಾಯಣದ ರಾಮನನ್ನೇ ಇಲ್ಲಿ ಸೃಷ್ಠಿಸಿರುವುದು ವಿಶೇಷ. ರಾಮ ಅಂದರೆ ಹಾಗೆ ಗಂಭೀರ ನಿಲುವು , ಸತ್ಯ ಧರ್ಮದ ಪ್ರತಿರೂಪ .

ರಾಮನಿಂದ ತಿರಸ್ಕೃತಳಾದ ಸೀತಾದೇವಿಯು ಮಹರ್ಷಿ ವಾಲ್ಮೀಕಿ ಆಶ್ರಮದ ಪಕ್ಕದಲ್ಲಿ ಕೃಷಿ ಮಾಡುತ್ತಾ ತನ್ನ ಅವಳಿ ಮಕ್ಕಳೊಂದಿಗೆ ವಾಸವಿರುತ್ತಾಳೆ. ಅತ್ತಿಗೆಯನ್ನು ಕಾಡಿಗಟ್ಟಿದ ನೋವಿನಿಂದ ಲಕ್ಷ್ಮಣನೂ ರಾಜ್ಯವನ್ನು ತ್ಯಜಿಸಿ  ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾನೆ. ಇವೆಲ್ಲವುದರ ನಡುವೆ ರಾಮನ ಧರ್ಮ ಸಭೆಯಲ್ಲಿ ವಾಲ್ಮೀಕಿಗಳು ರಾಮಾ ಸೀತರ ಪುನರ್ಮಿಲನಕ್ಕೆ  ಪ್ರಯತ್ನಿಸಿದ್ದರು.ಆದರೆ ಸೀತೆ ಗಟ್ಟಿಗಿತ್ತಿ, ಇವೆಲ್ಲವನ್ನು ತಿರಸ್ಕರಿಸಿ ಮರಳಿ ತನ್ನ ಕಾರ್ಯದಲ್ಲಿ ಮಗ್ನಳಾಗಿ  ರಾಮನ ಕಾಲವಾದ ನಂತರ ಅವನ ದಾರಿಯನ್ನು ಹಿಡಿದು ಮತ್ತೊಮ್ಮೆ ತನ್ನ ಪಾತಿವೃತ್ಯವನ್ನು ಇಡೀ ಜಗತ್ತಿಗೆ ತೋರಿಸಿದ್ದಾಳೆ. ಉತ್ತರಾಕಾಂಡದ ಸೀತೆಯು ಮನುಕುಲದ ಸ್ತ್ರೀಯರಿಗೆ ಮಾದರಿಯಾಗಿ ನಿಂತಿದ್ದಾಳೆ. ಶೋಷಣೆ, ಅನ್ಯಾಯವನ್ನು ಎದುರಿಸುವ ಧೈರ್ಯವನ್ನು ತುಂಬಿದ್ದಾಳೆ. ಸ್ವಾಭಿಮಾನಿಯಾದ ಉತ್ತರಾಕಾಂಡದ ಸೀತೆಯ ಪಾತ್ರ ಎಲ್ಲರೂ ಮೆಚ್ಚುವಂತದ್ದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ