ಬಾಲ್ಯ ಮತ್ತು ಶಾಲೆ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಸೋಮವಾರ, ಜುಲೈ 18, 2022

ಬಾಲ್ಯ ಮತ್ತು ಶಾಲೆ


-- ಭರತ್ ಕೊಠಾರಿ


ಪುಟ್ಟ - ಪುಟ್ಟ ಹೆಜ್ಜೆಗಳನ್ನು ಇಡುತ್ತ ನಡೆದ ದಿನಗಳು. ಅಪ್ಪ, ಅಮ್ಮ, ಅಜ್ಜ, ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ ಹೀಗೇ ಪ್ರತಿಯೊಬ್ಬರ ಮುದ್ದಿನ , ಮನೆಯ ಅತಿ ಚಿಕ್ಕ ಹುಡುಗನಾಗಿ ಎಲ್ಲರ ಪ್ರೀತಿ ಪಾತ್ರವಾದ ದಿನಗಳು. ದ್ವೇಷ, ಅಸೂಯೆ, ಅಹಂಕಾರ ಈ ಯಾವುದನ್ನೂ ಮನದಲ್ಲಿರಿಸದೆ ಕೇವಲ ಪ್ರೀತಿ, ಸ್ನೇಹ ಮತ್ತು ಅಮಾಯಕತೆಯೇ ತುಂಬಿದ್ದ ಆ ದಿನಗಳನ್ನು ನನ್ನ ಬಾಲ್ಯದಲ್ಲಿ ಬಿಟ್ಟರೆ ಬೇರೆ ಜೀವನಘಟ್ಟದಲ್ಲಿ ಊಹಿಸಲು ಅಸಾಧ್ಯ.

                        ಅದು ನನ್ನ ಶಾಲಾ ದಿನಗಳು , 1 ರಿಂದ 5 ನೇ ತರಗತಿಯ ವರೆಗೆ ಸ.ಹಿ.ಪ್ರಾ ಶಾಲೆ ಗದ್ದೆಹಳ್ಳಿಯಲ್ಲಿ ಓದಿದ್ದು. ಶಾಲೆಯ ಪ್ರಾರಂಭಿಕ ಹೆಜ್ಜೆಯು ರೋಚಕವಾಗಿತ್ತು. ಮೊದಲ ಬಾರಿಗೆ ತಂದೆ ಶಾಲೆಗೆ ಬಿಡಲು ಬಂದಾಗ ಹೊಟ್ಟೆನೋವು ಎಂದು ನೆಲದ ಮೇಲೆಲ್ಲ ಉರುಳಾಡಿ ವಾಪಸ್ಸು ಮನೆಗೆ ತೆರಳಿದ್ದು ನೆನಪಿಗೆ ಬರುತ್ತದೆ. ನನ್ನದು ನಾಟಕ ಎಂದು ತಿಳಿದು ತಂದೆಯೂ ಸಹ ಮರುದಿನ ನನ್ನನ್ನು ಶಾಲೆಯಲ್ಲಿಯೇ ಮಲಗಿಸಿ ಹೋದದ್ದು ನಂತರ ಎಚ್ಚರವಾದಾಗ ಅತ್ತು - ಕರೆದು ತದನಂತರದ ದಿನಗಳಲ್ಲಿ ಶಾಲೆಯು ಅಭ್ಯಾಸವಾಗಿತ್ತು. ನನ್ನ ರೀತಿಯೇ ಇತರ ಮಕ್ಕಳೂ ಸಹ ಅಳುವುದನ್ನು ನೋಡಿ ಸಮಾಧಾನ ಆಗುತ್ತಿತ್ತು. ನನ್ನ ರೀತಿಯೇ ಇವರೂ ಸಹ ಇದ್ದಾರಲ್ಲ ಎಂದು!! ಅಂದು ನಾವು ಗುರುಗಳಿಗೆ "ಅಕ್ಕೋರೆ" ಎಂದು ಸಂಬೋಧಿಸುತ್ತಿದ್ದೆವು. ಈಗಿನ ಭಾಷೆಯಲ್ಲಿ ಹೇಳಬೇಕೆಂದರೆ " Teacher or Mam is just a word but ಅಕ್ಕೋರೆ is an emotion " ಎನ್ನಬಹುದೇನೋ, ಭಾರತಿ ಅಕ್ಕೋರು ನನ್ನ  ಏಕೈಕ ಮತ್ತು ಮುದ್ದಿನ ಗುರುಗಳಾಗಿದ್ದರು.

                ಶಾಲೆಯ ಮೊದ ಮೊದಲು ಪರಿಚಯವಾದ ಮುಖ ನನ್ನದೇ ತರಗತಿಯ ಮಾನಸಾ & ಮೈತ್ರಿ ಎಂಬ ಹುಡುಗಿಯರು. ಇಬ್ಬರು ಗೆಳತಿಯರ ಮುದ್ದಿನ ಗೆಳೆಯ ನಾನಾಗಿದ್ದೆ. ಇಬ್ಬರೂ ಸಹ ಮನೆಯಿಂದ ಏನಾದರೊಂದು  ತಿನಿಸನ್ನು ತರುತ್ತಿದ್ದರು. ಆ ತಿನಿಸುಗಳೇ ನಮ್ಮ ಸ್ನೇಹವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿತ್ತು. ಮಾನಸಾ ಎಂಬುವವಳ ಆರಂಭಿಕ ತೊದಲು ನುಡಿಗಳು, ಮರ ಎನ್ನುವ ಬದಲು ಮಡ ಎನ್ನುತ್ತಿದ್ದಳು. ಇದು ನಮ್ಮೆಲ್ಲರನ್ನು ನಗೆಪಾಟಲಿಗೀಡುಮಾಡುತ್ತಿತ್ತು. ಇಬ್ಬರು ಸ್ನೇಹಿತರಿಂದ ಕಲಿತ ಪಾಠಗಳು ಬಹಳಷ್ಟಿದೆ.

              ಶಾಲೆಗೆ ಬರುವಾಗ ಪ್ರತಿದಿನ ಅಮ್ಮನ ಮುದ್ದಿನ ಅಪ್ಪುಗೆ ಮತ್ತು ತಲೆತುಂಬ ಎಣ್ಣೆಯನ್ನು ಹಾಕಿ ಬಾಚಿ ಶಾಲೆಗೆ ಕಳುಹಿಸುತ್ತಿದ್ದಳು. ಹೊರಡುವ ಮೊದಲು ಅಪ್ಪ, ಅಮ್ಮ, ಅಜ್ಜಿಯ ಕಾಲಿಗೆ ಬಿದ್ದು ನಮಸ್ಕರಿಸಿ ತೆರಳುತ್ತಿದ್ದೆ. ಆದರೆ ಇಂದು ಆ ಸಂಸ್ಕೃತಿ ನನ್ನಿಂದಲೂ ದೂರವಾಗಿದೆ. ಮಧ್ಯಾಹ್ನದ ಕಡು ಬಿಸಿಲಿಗೆ ಎಣ್ಣೆ ಕೂದಲಿನಿಂದ ಇಳಿದು ಹಣೆಯನ್ನು ಸ್ಪರ್ಶಿಸಿ ಕುಂಕುಮದ ಜೊತೆ ಬೆವರಿನ ರೀತಿ ಮುಖದ ಮೇಲೆ ಇಳಿಯುತ್ತಿತ್ತು. ದಟ್ಟಡವಿಯ ಮಧ್ಯೆ ಹೊಸ ಪ್ಯಾರಾಗಾನ್ 90 ರೂಪಾಯಿಯ 4 ನಂಬರಿನ ಚಪ್ಪಲಿಯನ್ನು ಹಾಕಿಕೊಂಡು ಕಾಲುವೆ, ಹೊಳೆಗಳನ್ನು ದಾಟಿಕೊಂಡು ಶಾಲೆಗೆ ಹೋಗುತ್ತಿದ್ದೆ.

                ಬೆಳಗ್ಗಿನ ಪ್ರಾರ್ಥನೆ, ನಾಡಗೀತೆ, ರಾಷ್ಟ್ರಗೀತೆ, ಪಂಚಾಂಗ ಇವುಗಳನ್ನು ಮುಗಿಸಿ ತರಗತಿಯಲ್ಲಿ ನಾವು ಮೂವರೂ ಕುಳಿತುಕೊಳ್ಳುತ್ತಿದ್ದೆವು. ಗುರುಗಳು ಬಂದಾಕ್ಷಣ " ಎಲ್ಲರೂ ಎದ್ದುನಿಲ್ಲಿರಿ, ನಮಸ್ಕಾರಗಳು, ನಮ್ಮ ತರಗತಿ ಕೋಣೆಗೆ ನಿಮಗೆ ಸ್ವಾಗತ, ಸುಸ್ವಾಗತ" ಎಂಬ ಆಗಮನ ವಾಕ್ಯದೊಂದಿಗೆ ಕರೆಯುತ್ತಿದ್ದೆವು. ಗುರುಗಳು ನನಗೆ ಭಿನ್ನರಾಶಿಯನ್ನು ಕಲಿಸಲು ತೆಗೆದುಕೊಂಡ ಬೃಹತ್ 1 ತಿಂಗಳುಗಳ ಕಾಲಾವಕಾಶವನ್ನು ನೆನೆಸಿಕೊಂಡು ಈಗಲೂ ನಗು ಬರುತ್ತದೆ. ಜೊತೆಗೆ ಗುರುಗಳಿಗೆ ನನ್ನ ಮೇಲಿದ್ದ ಕಾಳಜಿಯೂ ನೆನಪಾಗುತ್ತದೆ. ಪ್ರತಿ ದಿನ ಸಂಜೆ ಅಪ್ಪ ಅಮ್ಮ ಇಬ್ಬರೂ ಸೇರಿ ಸ್ಕೇಲು ಹಿಡಿದುಕೊಂಡು ಮಗ್ಗಿಯನ್ನು ಕಲಿಸುತ್ತಿದ್ದರು. ತಪ್ಪಾದಾಗ ಎರಡೂ ತೊಡೆಯನ್ನು ತಿಕ್ಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿತ್ತು.

        ಅಂದು ಊರಿನವರು ಮತ್ತು ಮನೆಯವರೆಲ್ಲ ಸೇರಿ ನಾಗ, ಚೌಡಿ ಮುಂತಾದ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು. ಅದನ್ನು ನೋಡಿ ನಾವೂ ಸಹ ಪ್ರತಿ ಶನಿವಾರ ಯಾರಿಗೂ ತಿಳಿಯದಂತೆ ಮಧ್ಯಾಹ್ನ ಶಾಲೆ ಬಿಟ್ಟಾಕ್ಷಣ ಮನೆಯಿಂದ ಕದ್ದು ತಂದಿದ್ದ ಊದುಬತ್ತಿ, ಕುಂಕುಮ, ಅರಿಶಿನ, ದೀಪವನ್ನು ಹಚ್ಚಿ ಕುಂಕುಮಾಭಿಷೇಕ ಮತ್ತು ಪೂಜೆಯನ್ನು ನಾವೇ ಆರಿಸಿಕೊಂಡ ಒಂದು ಬೃಹತ್ ಮರಕ್ಕೆ ಮಾಡುತ್ತಿದ್ದೆವು. ತದನಂತರ ಕುಂಕುಮವನ್ನು ಹಚ್ಚಿಕೊಂಡು ಮನೆಗೆ ಬರುತ್ತಿದ್ದೆವು. ಒಂದು ದಿನ ಗುರುಗಳು ಜಾತಿ ಬೇಧ ಮಾಡಬಾರದು ಎಂಬಿತ್ಯಾದಿ ಮಾತುಗಳನ್ನು ಮನಸ್ಸಿಗೆ ನಾಟುವಂತೆ ಹೇಳಿದ್ದರು. ಅಂದು ಮಧ್ಯಾಹ್ನ ಶಾಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಬಿಸಿಯೂಟ ಇರಲಿಲ್ಲ. ಅಕ್ಕೋರು ತಮ್ಮ ಮನೆಗೆ ನನ್ನನ್ನು ಮತ್ತು ಗೆಳೆಯರನ್ನು ಕರೆದೊಯ್ದಿದ್ದರು. ನಮಗೆ ಅವರು ಊಟ ಮಾಡುವ ಕೋಣೆಯ ಪಕ್ಕದಲ್ಲಿ ಸಾಲಾಗಿ ಊಟಕ್ಕೆ ಬಡಿಸಿದರು. ಅವರು ಒಳಗೆ ಕುಳಿತು ಊಟ ಮಾಡುತ್ತಿದ್ದರು. ಇದನ್ನು ನಾನು ಪ್ರಶ್ನಿಸಿ ಅಂದು ಹೇಳಿದ್ದ ಜಾತಿ ಬೇಧ ಮಾಡಬಾರದು ಎಂಬ ವಾಕ್ಯವನ್ನು ಅವರ ಮುಂದೆ ಇಟ್ಟಿದ್ದೆ.ತದನಂತರ ಅವರು ತಮ್ಮ ಜೊತೆಗೆ ಕುಳ್ಳಿರಿಸಿಕೊಂಡು ಊಟ ಮಾಡಿದ್ದರು. ಮೂಲತಃ ಬ್ರಾಹ್ಮಣರಾಗಿದ್ದರಿಂದ ಈ ಸಂಪ್ರದಾಯ ಚಾಲ್ತಿಯಲ್ಲಿತ್ತು. ಅಂದು ನನಗೆ ಇದಾವುದರ ಪರಿವೆಯೇ ಇರಲಿಲ್ಲ. Aa ಘಟನೆಯನ್ನು ನೆನಪಿಸಿಕೊಂಡರೆ ನನಗೆ ನನ್ನ ಮೇಲೆ ಒಂದು ರೀತಿಯ ಹೆಮ್ಮೆ ಮತ್ತು ನಾಚಿಕೆಯ ಭಾವ ಉಂಟಾಗುತ್ತದೆ.

          ಕೆಲವೊಮ್ಮೆ ಶಾಲೆಯಲ್ಲಿ ನನ್ನ ಸಹಪಾಠಿಗಳಿಬ್ಬರೂ ಬರದೆ ಇದ್ದ ದಿನಗಳು ಬೇಸರ ತರುತ್ತಿತ್ತು. ಆ ದಿನಗಳಲ್ಲಿ ಬೇಸರ ಕಳೆಯಲು ಶಾಲೆಯಲ್ಲಿ ಹೊಟ್ಟೆನೋವು ಎಂಬ ನೆವ ಹೇಳಿ ಶಾಲೆಗೆ ತಂದೆ ಬರುವಂತೆ ಮಾಡಿ 32 km ಗಳ ಶಿರಸಿಯ ಆಸ್ಪತ್ರೆಯವರೆಗೂ ಕರೆದೊಯ್ಯುವಂತೆ ಮಾಡಿದ್ದುಂಟು. 5ನೆ ತರಗತಿಯಲ್ಲಿ ನಮ್ಮ ಶಾಲೆಗೆ ಓರ್ವ ಶಿಕ್ಷಕರು ವರ್ಗವಾಗಿ ಬಂದಿದ್ದರು. ಅವರನ್ನು ನೋಡಿದರೆ ಭಯವಾಗಿ ಶಾಲೆಗೆ ಹೋಗುವುದೇ ಬೇಡ ಎನ್ನುವ ರೀತಿ ಅವರ ಮುಖಚರ್ಯೆಯಿತ್ತು. ಅವರು ಮಧ್ಯಾಹ್ನದ ವೇಳೆಗೆ ಘಡದ್ದಾಗಿ ತಿಂದು ಕುರ್ಚಿಗೆ ಒರಗಿ ಗೊರ್ ಎಂದು ಗೊರೆಯುತ್ತ ನಿದ್ರಿಸುತ್ತಿದ್ದರು. ಅವರ ನಿದ್ರೆಯನ್ನು ಸಹಿಸದ ನಾವು ಏನಾದರೊಂದು ಬರೆದುಕೊಂಡು ಹೋಗಿ good ಅಥವಾ very good ಎಂದು ಬರೆಸಿಕೊಂಡು ಬರುತ್ತಿದ್ದೆವು. ಅದನ್ನು ಒಬ್ಬರಿಗೆ ಒಬ್ಬರು ತೋರಿಸಿಕೊಂಡು ಯಾರದ್ದು ಹೆಚ್ಚಿದೆ ಎಂದು ಲೆಕ್ಕ ಹಾಕುತ್ತಿದ್ದೆವು. ಅಲ್ಲಿಯೂ ಸಹ ಮಹಿಳಾ ಪ್ರಧಾನ ಸಮಾಜ ಸ್ಥಾಪನೆಯಾಗಿ ನನ್ನ ಇಬ್ಬರು ಗೆಳತಿಯರದ್ದೇ ಮೇಲುಗೈ ಇರುತ್ತಿತ್ತು.

        ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಸ್ವಾದವೇ ಬೇರೆಯಾಗಿತ್ತು. ಮಾದೇವಿ ಎಂಬುವವಳು ನಮ್ಮ ಶಾಲೆಯ ಅಡುಗೆ ಮಾಡುವವಳಾಗಿದ್ದಳು. ನನಗೆ ತರಕಾರಿಗಳಲ್ಲಿ ಮರವನ್ನು ಹೋಲುವ ಹೂಕೋಸನ್ನು ಕಂಡರೆ ಮೈಯೆಲ್ಲ ಉರಿಯುತ್ತಿತ್ತು. ಆದರೂ ಸಹ ಅಡುಗೆಯವಳು ಅದನ್ನು ತಿನ್ನಿಯಿಸಿಯೇ ಶತಸಿದ್ಧಳಾಗಿದ್ದಳು. ಹಾಗೋ ಹೀಗೋ ನನ್ನ 1 ರಿಂದ 5ನೆ ತರಗತಿವರೆಗಿನ ಶಿಕ್ಷಣದ ಹಂತ ಮುಗಿಯುತ್ತಾ ಬಂದಿತ್ತು. ಬೀಳ್ಕೊಡುಗೆಯ ಆ ಅತ್ಯಂತ ನೋವಿನ ದಿನಗಳು ನಮ್ಮೆಲ್ಲರ ಕಣ್ಣಂಚನ್ನು ಒದ್ದೆ ಮಾಡಿಸಿತ್ತು. ಗುರುಗಳು ನಮ್ಮನ್ನು ತಬ್ಬಿಕೊಂಡು ಅತ್ತಾಗ ಆ ಭಾವ ನಮಗೆ ಈಗ ತಿಳಿಯುತ್ತಿದೆ. ಅಂದು ತಿಳಿದದ್ದು ಒಂದೇ ವಿಷಯ ಇನ್ನು ನಮಗೂ ಈ ಶಾಲೆಗೂ ಋಣ ತೀರಿತೆಂದು.ತದನಂತರದ ದಿನದಲ್ಲಿ ನನ್ನ ಇಬ್ಬರೂ ಗೆಳತಿಯರು ಬೇರೆ ಬೇರೆ ದಿಕ್ಕಿನತ್ತ ಪಯಣಿಸಿದರು. ನನ್ನ ಶಾಲೆಯ ಪ್ರತಿಯೊಬ್ಬರನ್ನು ಇಂದಿಗೂ ನಾನು ನೆನೆಸುತ್ತೇನೆ. ಪ್ರತಿಯೊಂದು ಹೆಜ್ಜೆಯೂ ಸಹ ಒಂದೊಂದು ಬಾಲ್ಯದ ನೆನಪನ್ನು ಮರುಕಳಿಸುತ್ತದೆ. ಕಾಲಘಟ್ಟದಲ್ಲಿ ಕಳೆದುಹೋದದ್ದು ಕೇವಲ ನನ್ನ ಬಾಲ್ಯದ ದಿನಗಳು ಆದರೆ ಅದರ ನೆನಪು ನನ್ನ ತನು - ಮನದಲ್ಲಿ ಇಂದಿಗೂ ಇದೆ. ಮುಂದೆಯೂ ಇರುತ್ತದೆ. ದ್ವಿತೀಯ ಗುರುಗಳಾದ ಭಾರತಿ ಅಕ್ಕೋರಿಗೆ ನನ್ನ ಅನಂತಾನಂತ ಪ್ರಣಾಮಗಳು.

         ಒಂದೊಮ್ಮೆ ದೇವರು ಪ್ರತ್ಯಕ್ಷವಾಗಿ ಜೀವನದ ಯಾವ ಘಟ್ಟವನ್ನು ಬೇಡುತ್ತೀಯ ಎಂದರೆ ಅದು ನನ್ನ ಬಾಲ್ಯ. ಕಾಲಚಕ್ರದ ಯಂತ್ರದಲ್ಲಿನ ಸ್ವಚ್ಚಂದದ ಬಾಲ್ಯವೇ ನನ್ನ ಅತೀ ಸುಂದರದ ಕಾಲಘಟ್ಟ. ನಾನು ಅದನ್ನೇ ಬೇಡುತ್ತೇನೆ. ಬಾಲ್ಯದ ಶಾಲಾ ದಿನಗಳು ಮರೆಯಲಾಗದ ಮಾಣಿಕ್ಯ.




                                               -- ಭರತ್ ಕೊಠಾರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ