ಹಳ್ಳಿ ಸೊಬಗು. - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ನವೆಂಬರ್ 29, 2022

ಹಳ್ಳಿ ಸೊಬಗು.

                                                                     ‌                                         ಹಳ್ಳಿ ಎಂದರೆ   ಬಾಂಧವ್ಯ  ಬೆಸೆಯುವ ಸುಂದರ ಬಳ್ಳಿ. ನಮ್ಮ ದೇಶ ಹಳ್ಳಿಗಳ ದೇಶ. ಜೀವನಕ್ಕೆ ಬೇಕಾದ ಅಗತ್ಯ ಮೂಲ ನಮ್ಮ ಹಳ್ಳಿಗಳಲ್ಲಿ ದೊರೆಯುವುದು.          ‌‌            ‌ ಹಳ್ಳಿಯ ಸೊಬಗು ನಯನ ಮನೋಹರ ಬೆಟ್ಟ, ಗುಡ್ಡ, ಕೆರೆ, ಕಟ್ಟೆ, ಬಯಲು, ತೋಟ, ಹಸಿರು, ಪಶು ಪಕ್ಷಿ ಹೀಗೆ ಹೇಳುತ್ತಾ ಹೋದರೆ ಕೊನೆ ಇಲ್ಲದಂತಾಗುವುದು.                  ‌      ಹಳ್ಳಿಯ ಜೀವನ ಮುಂಜಾನೆ ನಸುಕಿನಲ್ಲಿಯೇ ಪ್ರಾರಂಭವಾಗುವುದು. ಆಗತಾನೆ ಬೆಟ್ಟದ ತುದಿಯಿಂದ ಉದಯಿಸುವ ಸೂರ್ಯ ಪಕ್ಷಿಗಳ ಕಲರವ, ದನ ಕರುಗಳ ಮತ್ತು ಕೋಳಿಗಳ ಕೂಗು ಕೇಳಲು ಮನಸ್ಸಿಗೆ ತಂಪು ಕರ್ಣಗಳಿಗೆ ಇಂಪು.                    ‌     ಇನ್ನು ಸೊಂಪಾಗಿ ಬೆಳೆದಿರುವ ಮರಗಿಡಗಳ ನಡುವೆ ಅಂತಹ ವಾತಾವರಣದಲ್ಲಿ ನಡೆದರಂತೂ ಸ್ವರ್ಗಕ್ಕೆ ಮೂರೇ ಗೇಣು.             ‌ ನಮ್ಮ ಹಳ್ಳಿ ಮಂದಿ ಮುಂಜಾನೆ ನಸುಕಿನಲ್ಲಿ ಎದ್ದು ದನ ಕರುಗಳ ಕೊಟ್ಟಿಗೆಯನ್ನು ಸ್ವಚ್ಛ ಮಾಡಿ ಹಾಲು ಕರೆದು ಸೂರ್ಯನೆತ್ತಿ ಮೇಲೆ ಬರುವ ಹೊತ್ತಿಗೆ ತೋಟಕ್ಕೆ ಹೋಗಿ ಹುಲ್ಲು ಕೊಯ್ದು ಹೊತ್ತು ತರುವವರು.             ‌ ತಂಪಾದ ವೇಳೆಯಲ್ಲಿ ಬೆಳೆಗಳ ಮಧ್ಯೆ ಇರುವ ಕಳೆ ತೆಗೆಯುವ, ಬೆಳೆ ಬಂದಾಗ ಕೊಯ್ಲು ಮಾಡುವ ಇನ್ನು ಇತ್ಯಾದಿ ಕೆಲಸಗಳನ್ನು ಮಾಡಿ ಮುಗಿಸುವವರು.  ಮುಂಜಾನೆಯಿಂದಲೇ ಕಾರ್ಯಗಳು ಆರಂಭವಾಗುವುದರಿಂದ ಅವರಿಗೆ ಯಾವುದೇ ಜಿಮ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಉತ್ತಮ ಆಹಾರ ಸೇವನೆ ಉತ್ತಮ ವ್ಯಾಯಾಮ ಇವರ ಆರೋಗ್ಯದ ಗುಟ್ಟು .        ‌ ಇನ್ನೂ ಹಳ್ಳಿಯಲ್ಲಿ ಹಿರಿಯ ವ್ಯಕ್ತಿಗಳಿಗೆ ಗೌರವ ಕೊಡುವುದು ಪಡ್ಡೆ ಹುಡುಗರು ಆಟ ಆಡುವ ಸಮಯದಲ್ಲಿ ಹಳ್ಳಿಯ ಹಿರಿಯ ವ್ಯಕ್ತಿಗಳೇ ಕಾಣಿಸಿಕೊಂಡರೆ ಸಾಕು ಕಾಲಿಗೆ ಬುದ್ಧಿ ಹೇಳುವವರು. ಹೆಂಗಸರು ತಲೆಯ ಮೇಲೆ ಸೆರಗು ಹೊತ್ತು ಒಳಗೆ ಹೋಗುವರು. ಹಳ್ಳಿಯಲ್ಲಿ ಗುರುಹಿರಿಯರಿಗೆ ಗೌರವ ಕೊಡುವ ಕಾಯಕ ಇನ್ನೂ ಜೀವಂತವಾಗಿದೆ.                 ‌                ‌  ಹಳ್ಳಿಗಳಲ್ಲಿ ಸಾಮಾನ್ಯವಾಗಿ ಅವಿಭಕ್ತ ಕುಟುಂಬಗಳ ಇನ್ನು ಪ್ರಚಲಿತದಲ್ಲಿವೆ ಮತ್ತು ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ ಬಾಂಧವ್ಯ ಹೆಚ್ಚಾಗಿರುತ್ತದೆ. ಪ್ರತಿ ಮನೆಗಳ ಸಮಸ್ಯೆ ಮತ್ತು ಖುಷಿಗಳ ವಿಚಾರಗಳು ಇಡೀ ಹಳ್ಳಿಗಳಲ್ಲಿಯೇ ಎಲ್ಲರಿಗೂ ತಿಳಿದಿರುತ್ತದೆ. ಹಳ್ಳಿಯಲ್ಲಿ ಏನು ಇಲ್ಲದೆ ಇದ್ದರೂ ಆರಾಮಾಗಿ ಜೀವನವ ಸಾಧಿಸಬಹುದಾಗಿದೆ. ನೆರೆಹೊರೆಯವರು ಸದಾ ಸಹಾಯದ ಹಸ್ತ ನೀಡುತ್ತಾರೆ.        ‌ ಹಳ್ಳಿಗಳಲ್ಲಿ ಕನಿಷ್ಠಪಕ್ಷ ತಿಂಗಳಿಗೆ ಎರಡು ಹಬ್ಬಗಳನ್ನಾದರೂ ಆಚರಿಸುವರು. ಯಾವುದೇ ಹಬ್ಬ ಇಲ್ಲವೆಂದರೆ ಅಮಾವಾಸ್ಯೆ ಹುಣ್ಣಿಮೆಗಳನ್ನು ಹಬ್ಬದ ರೀತಿಯಲ್ಲಿ ಮನೆಯಲ್ಲಾ ಸಾರಿಸಿ ಗುಡಿಸಿ ರಂಗೋಲಿ ಹಾಕಿ ಸಿಹಿ ಅಡುಗೆ ಮಾಡಿ ಆಚರಿಸುವವರು. ಜನವರಿಯಲ್ಲಿ ಲಕ್ಷ್ಮಿ ಹಬ್ಬ ಊರಿನ ಗ್ರಾಮ ದೇವತೆ ಮಾರಿಹಬ್ಬ ರಥೋತ್ಸವಗಳು, ಜಾತ್ರೆ ಹೀಗೆ ಅನೇಕ ಹಬ್ಬಗಳನ್ನು ವಿಜೃಂಭಣೆಯಿಂದ ಪ್ರತಿಯೊಬ್ಬರು ಪಾಲ್ಗೊಂಡು ಆಚರಿಸುವವರು.                      ‌.  ಹಳ್ಳಿಗಳಲ್ಲಿ ಮಕ್ಕಳು ಸ್ವಚ್ಛಂದವಾಗಿ ಹಳ್ಳಿಗಳಂತೆ ಸ್ವತಂತ್ರವಾಗಿ ಬೆಳೆಯುತ್ತಾರೆ. ಹುಟ್ಟಿದ ಮಗು ಹೆಚ್ಚು ಅಂದರು ಆರು ತಿಂಗಳು ಮನೆ ಒಳಗೆ ಇರಬಹುದು. ನಂತರ ಹೊರಗಡೆ ಎಲ್ಲರೊಂದಿಗೆ ಬೆಳೆಯುತ್ತದೆ ಎಲ್ಲರನ್ನೂ ನೋಡಿ ನೈತಿಕತೆಯನ್ನು ಬೆಳೆಸಿಕೊಳ್ಳುತ್ತದೆ. ಯಾವುದೇ ಪಾಠದ ಅವಶ್ಯಕತೆ ಇರುವುದಿಲ್ಲ

ಏಕೆಂದರೆ ನಗರದಲ್ಲಿ ಇರುವ ಮಕ್ಕಳು ತಂದೆ, ತಾಯಿ, ದೂರದರ್ಶನ, ಇಷ್ಟಕ್ಕೆ ಸೀಮಿತವಾಗಿರುತ್ತಾರೆ ಆದರೆ ಹಳ್ಳಿಯ ಮಕ್ಕಳು ಎಲ್ಲರೊಂದಿಗೆ ಬೆರೆತು ಕೇಳಿನೋಡಿ ಅನುಭವದಿಂದ ಬೆಳೆಯುತ್ತಾರೆ.                            ‌ ಒಟ್ಟಾರೆಗೆ ಹಳ್ಳಿಯ ಜೀವನ ಯಾವಾಗಲೂ ತಂಪಾಗಿರುತ್ತದೆ. ಮನಸ್ಸಿಗೆ ಸಂತೋಷ ನೆಮ್ಮದಿ ನೀಡುತ್ತದೆ. ಯಾವುದೇ ಮಾಲಿನ್ಯವಿರದೆ ಬದುಕು ಇವರದ್ದಾಗಿದೆ. ಉತ್ತಮ ಆಹಾರ ಗಾಳಿ, ನೀರು, ಹೀಗೆ ಮುಂಜಾನೆ ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಬ್ರಷ್ ಮತ್ತು ರಾಸಾಯನಿಕ ಮಿಶ್ರಿತ ಪೇಸ್ಟ್ ಬದಲಿಗೆ ನಮ್ಮ ಹಳ್ಳಿ ಜನ ಬೇವಿನಕಟ್ಟಿ ಮತ್ತು ತೆಂಗಿನ ಹೊಂಬಾಳೆ ಸುಟ್ಟು ಅದರೊಟ್ಟಿಗೆ ಉಪ್ಪು ಲವಂಗ ಬೆರೆಸಿ ಹಲ್ಲು ಉಜ್ಜುವರು. ನಿಜವಾಗಿಯೂ ಅವರ ಹಲ್ಲುಗಳು ತುಂಬಾ ಗಟ್ಟಿ ಮತ್ತು ಬಲಿಷ್ಠ.                             ‌ ‌.        ‌ ಬಾಳೆ ಎಲೆಯ ಊಟ ಯಾವುದೇ ಚಮಚ ಬಳಸದೆ ತಮ್ಮ ಐದು ಬೆರಳುಗಳನ್ನು ಬಳಸಿ ಊಟ ಮಾಡುವ ಪರಿ ಅವರನ್ನು ಸದಾ ಆರೋಗ್ಯಕರವಾಗಿರುವಂತೆ ಮಾಡಿದೆ.           ಅವರು ಆಹಾರಕ್ಕಾಗಿ ಬಳಸುವ ರಾಗಿ, ಜೋಳ, ಗೋಧಿ, ನವಣೆ, ಸಜ್ಜೆ , ಸಾವೆ ಎಲ್ಲಾ ಆಹಾರ ಧಾನ್ಯಗಳು ಅವರನ್ನು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ದಿಂದ ಬಹು ದೂರ ಇಟ್ಟಿದೆ.                                       ‌.        ಹಳ್ಳಿಯ ಜೀವನ ಚಂದ .ಹಳ್ಳಿಯ ಸೊಬಗು ಇನ್ನು ಚಂದ....                                    ‌.                                                                             ‌                                           

ನಾಗರತ್ನ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ