ಭಾರತದಲ್ಲಿ ಇಳಿ ವಯಸ್ಸಿನ ಸಮಸ್ಯೆಗಳು. - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಡಿಸೆಂಬರ್ 21, 2022

ಭಾರತದಲ್ಲಿ ಇಳಿ ವಯಸ್ಸಿನ ಸಮಸ್ಯೆಗಳು.

  

ಎಲ್ಲೋ ಒಂದು ಮಾತು ಕೇಳಿದ ನೆನಪು, ಈ ಜಗತ್ತಿನಲ್ಲಿ ಮಕ್ಕಳು ಕೆಟ್ಟವರಿರಬಹುದು ಹೊರತು ಹೆತ್ತ ತಂದೆ- ತಾಯಿಯರಲ್ಲ. ಈ ಮಾತು ಎಷ್ಟು ಸತ್ಯ. ಒಂಬತ್ತು ತಿಂಗಳು ಹೆತ್ತು ಹೊತ್ತು ಮಕ್ಕಳನ್ನು ದೊಡ್ಡವರನ್ನಾಗಿ ತಾಯಿಮಾಡುತ್ತಾಳೆ ಅವಳಿಗೆ ಬೆನ್ನೆಲುಬಾಗಿ ತಂದೆ ಇರುತ್ತಾನೆ. ಎಲ್ಲೋ ಹೀಗೆ ಕೇಳಿದ ಮಾತು ಹೆತ್ತಿದ್ದು ಅಮ್ಮನಾದರೂ ಒಳಗೊಳಗೆ ಅತ್ತಿದ್ದು ಮಾತ್ರ ಅಪ್ಪ, ಕೂಗಿದ್ದು ಅಮ್ಮ ಎಂದಾದರೂ  ನಿಟ್ಟುಸಿರು ಬಿಟ್ಟಿದ್ದು ಮಾತ್ರ ಅಪ್ಪ ,ವಿದ್ಯೆ ಕಲಿಸಿದ್ದು ಅಮ್ಮನಾದರು ದಾರಿ ದೀಪವಾದದ್ದು ಅಪ್ಪ ಇದು ಎಷ್ಟು ನಿಜವೆಂದು ಯೋಚಿಸಿ ನೋಡಿ. ಸುಮಾರು 20 ವರ್ಷಗಳ ಹಿಂದೆ ನೋಡಿದಾಗ ನಮ್ಮ ಸಮಾಜದಲ್ಲಿ ಕೂಡು ಕುಟುಂಬಗಳು ಕಾಣಿಸುತ್ತಿತ್ತು.ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಅಪ್ಪ- ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ, ಅಕ್ಕ, ತಂಗಿ, ತಮ್ಮ ಹೀಗೆ ಎಲ್ಲರೂ ಒಬ್ಬರ ಕಷ್ಟಕ್ಕೆ,ನೋವು ನಲಿವಿಗೆ ಇನ್ನೊಬ್ಬರು ಸ್ಪಂದಿಸುತ್ತಿದ್ದರು.ಆದರೆ ಈಗ ಇಂತಹ ಕೂಡು ಕುಟುಂಬವು ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಇದಕ್ಕೆಲ್ಲಾ ಕಾರಣವೆಂದರೆ ಬಹುಶಹ ಶಿಕ್ಷಣ ಪದ್ಧತಿ. ಅಂದಿನ ಶಿಕ್ಷಣ ಕೇವಲ ವಿದ್ಯಾಭ್ಯಾಸವನ್ನಷ್ಟೇ ಅಲ್ಲದೆ ಜೀವನದ ಮೌಲ್ಯವನ್ನು ಕೂಡ ಕಲಿಸುತ್ತಿತ್ತು. ಆದರೆ ಈಗಿನ ಶಿಕ್ಷಣ ಜೀವನದ ಮೌಲ್ಯವನ್ನು ಕಲಿಸುತ್ತಿದೆಯೇ? ಬಹುಶಹ ಇಲ್ಲ.ಇದು ಕೇವಲ ಉದ್ಯೋಗಕಷ್ಟೇ ಸೀಮಿತ ಅನಿಸುತ್ತದೆ.ಆಗ ಹೆಚ್ಚಿನ ಜನ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದ್ದರಿಂದ ವಯೋವೃದ್ಧರಿಗೆ ಅಷ್ಟೊಂದು ಸಮಸ್ಯೆ ಕಾಣಿಸುತ್ತಿರಲಿಲ್ಲ. ಒಂದು ವೇಳೆ ಅವರಿಗೆ ಏನಾದರೂ ಸಮಸ್ಯೆಯಾದಲ್ಲಿ ಕುಟುಂಬದವರು ಅವರ ನೆರವಿಗೆ ಬರುತ್ತಿದ್ದರು. ಆದರೆ ಈಗ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ.                   

ಈಗಿನ ಕಾಲದಲ್ಲಿ ಯಾರು ಲಾಭವಿಲ್ಲದೆ ಏನನ್ನು ಮಾಡುವ ಮನಸ್ಥಿತಿಯಲ್ಲಿಲ್ಲ.ಆದರೆ ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಳ್ಳದೆ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದು ನಮ್ಮ ತಂದೆ-ತಾಯಿ.ಹಿಂದಿನ ಕಾಲದಲ್ಲಿ ತಂದೆ ತಾಯಿಯನ್ನು ನಮ್ಮ ಪ್ರಪಂಚವೆಂದು ಭಾವಿಸುತ್ತಿದ್ದರು. ಕಣ್ಣಿಗೆ ಕಾಣದ ದೇವರನ್ನು ಪೂಜಿಸುವುದಕ್ಕಿಂತ ಕಣ್ಣಿಗೆ ಕಾಣುವ ದೇವರ ಸ್ವರೂಪವಾದ ತಂದೆ ತಾಯಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿಯಾಗಿತ್ತು. ಆದರೆ ಈಗ ಇದೆಲ್ಲವೂ ಕ್ರಮೇಣ ಕ್ಷೀಣಿಸುತ್ತಿದೆ. ನಮ್ಮಿಂದ ಎಷ್ಟೋ ದೂರವಿರುವ ಚಂದ್ರ ಹಾಗು ಮಂಗಳ ಗ್ರಹದ ಮೇಲೂ ಕಾಲಿಟ್ಟಿದ್ದೇವೆ. ಆದರೆ ನಮ್ಮ ಜೊತೆಗೆ ಇರುವ ದೈವಿ ಸ್ವರೂಪವಾದ ತಂದೆ ತಾಯಿಯ ಬಳಿ ಒಂದಿಷ್ಟು ಸಮಯ ಕಳೆಯಲು ಅಥವಾ ಅವರಿಗೆಂದು ಸಮಯ ಮೀಸಲಿಡಲು ನಮ್ಮ ಬಳಿ ಸಾಧ್ಯವಾಗುತ್ತಿಲ್ಲ. ನಾನು ನನ್ನದು ಎಂಬ ಸ್ವಾರ್ಥ ತುಂಬಿರುವ ಈ ಜಗತ್ತಿನಲ್ಲಿ ನಿಸ್ವಾರ್ಥಿಗಳಾಗಿ ನಮ್ಮ ಮಕ್ಕಳಿಗೆಂದು ಅದೆಷ್ಟು ದಿನ ನಿದ್ದೆಗೆಟ್ಟಿದ್ದರೋ, ಹಸಿವಿ ನಿಂದಿದ್ದರೋ ಗೊತ್ತಿಲ್ಲ. ಆದರೆ ತಮ್ಮ ಮಕ್ಕಳಿಗೆ ಅದಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಕಣ್ಣಿನ ರೆಪ್ಪೆಯು ಎಷ್ಟು ಜೋಪಾನವಾಗಿ ಕಣ್ಣನ್ನು ಸುರಕ್ಷಿತವಾಗಿಡುತ್ತದೆಯೋ ಅಷ್ಟೇ ಸುರಕ್ಷಿತವಾಗಿ ಕಾಳಜಿ ಪ್ರೀತಿಯಿಂದ ನಮ್ಮನ್ನು ಜೋಪಾನ ಮಾಡುತ್ತಾರೆ. ಇಷ್ಟೇ ಅಲ್ಲ ತಾಯಿ ನೋವು ಎಂದು ಸುಮ್ಮನಿದ್ದಿದ್ದರೆ  ನಾವು ಈ ಪ್ರಪಂಚಕ್ಕೆ ಕಾಲೆ ಇಡುತ್ತಿರಲಿಲ್ಲ ಅಥವಾ ನಮಗೆ ಏಕೆ ಎಂದು ಎಲ್ಲೋ ಬಿಟ್ಟು ಹೋಗಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ಒಮ್ಮೆ ಯೋಚಿಸಿ.

ಆದರೆ ಅವರು ಇದಾವುದೂ ಮಾಡದೆ ಜೋಪಾನ ಮಾಡಿ ನಮ್ಮ ಗುರಿ ತಲುಪಲು ಸಹಾಯ ಮಾಡುತ್ತಾರೆ. ನಮ್ಮ ನೋವನ್ನು ಅವರದ್ದು ಎಂದು ತಿಳಿದು ನಮ್ಮ ಸಂತೋಷವನ್ನು ಅವರ ಸಂತೋಷ ಎಂದು ತಿಳಿದು ಅಷ್ಟೇ ಅಲ್ಲ ಬಿದ್ದಾಗ ಜೊತೆ ಇದ್ದು ಸಾಂತ್ವನ ಮಾಡಿ ನಾವು ಗೆದ್ದಾಗ ತಾವು ಗೆದ್ದ ಹಾಗೆ ಖುಷಿಪಟ್ಟ ನಮ್ಮ ತಂದೆ ತಾಯಿಯನ್ನು ಅವರ ಕಷ್ಟದಲ್ಲಿ ನಾವು ಹೆಗಲಾಗಿರದೆ ವೃದ್ಧಾಪ್ಯದಲ್ಲಿ ಎಲ್ಲೋ ಗೊತ್ತು ಗುರಿ ಇಲ್ಲದ ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದೇವೆ. ಇದು ಎಷ್ಟು ಸರಿ?

ಮುಪ್ಪಿನ ಸಂದರ್ಭದಲ್ಲಿ ದೃಷ್ಟಿ ಕಡಿಮೆಯಾಗುತ್ತಾ ಬರುತ್ತದೆ, ಕಿವಿಗಳು ಮಂದವಾಗುತ್ತದೆ, ಬ್ಲಡ್ ಪ್ರೆಷರ್, ಶುಗರ್, ಕೀಲು ನೋವು ಹೀಗೆ ನಾನಾ ವಿಧದ ಕಾಯಿಲೆಗಳಿಂದ ಬಳಲುತ್ತಾರೆ. ಇಂತಹ ಸಂದರ್ಭದಲ್ಲಿ ಅವರನ್ನು ನಮ್ಮ ಜೊತೆಗೆ ಇರಿಸಿಕೊಳ್ಳುವ ಬದಲು ವೃದ್ಧಾಶ್ರಮಕ್ಕೆ ಬಿಟ್ಟು ಬರುತ್ತಿದ್ದೇವೆ. ಮುಂದೆ ಒಂದು ದಿನ ನಾವು ವೃದ್ಧರಾಗುತ್ತೇವೆ ಅಂದು ನಮ್ಮ ಮಕ್ಕಳು ನಮ್ಮನ್ನು ಇಲ್ಲೇ ಬಿಟ್ಟು ಹೋಗುತ್ತಾರೆ. ಅಂದು ನಮಗೆ ಎಷ್ಟು ದುಃಖವಾಗುತ್ತದೆಯೋ ಅಷ್ಟೇ ದುಃಖ ನೋವು ನಮ್ಮ ತಂದೆ ತಾಯಿಗೆ ಆಗುತ್ತದೆ ಎಂದು ನಮಗೆ ಏಕೆ ಅರ್ಥವಾಗುವುದಿಲ್ಲ.

ದೀಪವು ಹೇಗೆ ತಾನೇ ಉರಿದು ಜಗತ್ತಿಗೆ ಬೆಳಕನ್ನು ನೀಡುತ್ತದೆಯೋ ಹಾಗೆ ನಮ್ಮ ತಂದೆ ತಾಯಿ ಕೂಡ ಅವರ ಕಷ್ಟ ನೋವು ದುಃಖಗಳನ್ನೆಲ್ಲ ಬದಿಗೆ ಇಟ್ಟು ನಮ್ಮ ಒಳಿತಿಗಾಗಿ ಶ್ರಮಿಸುತ್ತಾರೆ. ಅವರನ್ನು ನಾವು ಎಂದಿಗೂ ಸಂತೋಷದಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು ಇದು ನಮ್ಮ ಕರ್ತವ್ಯ.

ನನ್ನ ಪ್ರಕಾರ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಎರಡಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಏಕೆಂದರೆ ಅನಾಥಾಶ್ರಮದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿರುತ್ತಾರೆ. ಅದೇ ರೀತಿ ವೃದ್ಧಾಶ್ರಮದಲ್ಲಿ ತಮ್ಮ ಮಕ್ಕಳಿದ್ದರೂ ತಂದೆ ತಾಯಿ ಅನಾಥರಾಗಿ ಒಬ್ಬಂಟಿಯಾಗಿ ಇರುತ್ತಾರೆ. ಇದೊಂದು ವಿಪರ್ಯಾಸವೇ ಸರಿ.ವೃದ್ಧಾಶ್ರಮ ಮತ್ತು ಅನಾಥಾಶ್ರಮ ಎರಡನ್ನೂ ಸೇರಿಸಿದರೆ ಬಹುಶಹ ಅನಾಥ ಮಕ್ಕಳಿಗೆ ತಂದೆ ತಾಯಿ, ಅಜ್ಜ ಅಜ್ಜಿಯ ಪ್ರೀತಿಯ ಜೊತೆಗೆ ಒಳ್ಳೆ ನಡತೆ, ಗುಣ ಸಂಸ್ಕಾರವು ಸಿಗಬಹುದು. ಅಷ್ಟೇ ಅಲ್ಲ ಇದರ ಜೊತೆಗೆ ಅವರಿಗೂ ತಮ್ಮ ಮಕ್ಕಳಿಂದ ದೂರ ಇರುವ ನೋವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಕೊಂಚ ಅದರಿಂದ ಹೊರಬರಲು ಸಾಧ್ಯವಾಗಬಹುದು ಎಂಬುದು ಕೇವಲ ನನ್ನ ಅಭಿಪ್ರಾಯವಷ್ಟೇ.


                                                    ಪೂರ್ಣಿಮಾ ಭಟ್

                                                     ಬಿ ಎ ಅಂತಿಮ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ