ಅಪ್ಪನ ಪ್ರೀತಿ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಏಪ್ರಿಲ್ 20, 2024

ಅಪ್ಪನ ಪ್ರೀತಿ

 

 ಅಪ್ಪ " ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ...... ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾದ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ. ಕೋಪ ಅತಿ ಎನ್ನಿಸುವ ಶಿಸ್ತು. ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ.


ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಗೊಡಲಾರ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳಾನೇ ಕಷ್ಟ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಮ್ಯಾಜಿಕ್ ಬಾಕ್ಸ್. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ...ತೋರು ಬೆರುಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವ..... ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮೂಡುತ್ತಿದ್ದ ಭಾವ ಭಯ. ಸಣ್ಣಪುಟ್ಟ ಕಾರಣಕ್ಕೂ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಭಾವಿಸಿ, ಕೂಗಾಡಿ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದ ಆತನ ಕೋಪಕ್ಕೆ ಆತನೇ ಸಾಟಿ....ಅದಕ್ಕೆ ಏನೋ ಎಲ್ಲ ಮಕ್ಕಳ ಡಿಮ್ಯಾಂಡುಗಳು ಮೊದಲು ತಾಯಿಯ ಬಳಿಯೇ. ಏನನ್ನೇ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೆ ಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ. ಹಾಗಿದ್ದಾಗ ಎದುರು ನಿಂತು ಮಾತನಾಡುವ ಪ್ರಶ್ನೆ ಇಲ್ಲವೇ ಇಲ್ಲ.


ಹಾಗೆಂದು ಆತ ಸರ್ವಾಧಿಕಾರಿಯಲ್ಲ. ಬದಲಿಗೆ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ. ಆದರೆ ಕಾಲ ಬದಲಾದಂತೆ ಅಪ್ಪನೂ ಸಹ ಬದಲಾಗುತ್ತಿದ್ದಾನೆ. ಅಂದಿನ ಅಪ್ಪನಲ್ಲಿದ್ದ ದರ್ಪ, ಕೋಪ..ಅನುಮಾನ ಇಂದಿನ ಅಪ್ಪಂದಿರಲ್ಲಿಲ್ಲ...ಕೊಂಚ ಕೊಂಚವಾಗಿ ಕಡಿಮೆಯಾಗುತ್ತಿದೆ, ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ. ಈಗಿನ ಅಪ್ಪ ಮಕ್ಕಳನ್ನು ಅನುಮಾನದಿಂದ ನೋಡಲ್ಲ.... ಬದಲಿಗೆ ಅಭಿಮಾನದಿಂದ ಕಾಣುತ್ತಾನೆ. ಅವರ ಬಯಕೆಗಳಿಗೆ ಸಮಸ್ಯೆಗಳಿಗೆ ಕಿವಿಯಾಗುತ್ತಾನೆ... ಅವರ ಕೋರಿಕೆಗಳ ಹಿಂದಿನ ಅವಶ್ಯಕತೆಗಳನ್ನು ಅರಿಯಲು ಮನಸ್ಸು ಮಾಡುತ್ತಿದ್ದಾನೆ... ಹಿಂದೆಲ್ಲಾ ತನ್ನ ಇಚ್ಚೆಗನುಸಾರವಾಗಿ ಮಕ್ಕಳು ಬೆಳೆಯಬೇಕು ಎಂದು ಬಯಸುತ್ತಿದ್ದ ಅಪ್ಪ...ಈಗ ಮಕ್ಕಳ ಓದಿನ, ಆಟದ, ಸ್ನೇಹಿತರ ಅಷ್ಟೆ ಏಕೆ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಸ್ವಾತಂತ್ರ್ಯ ನೀಡಿದ್ದಾನೆ. ಮಕ್ಕಳ ಮನಸ್ಸನ್ನು ಅರಿತಿದ್ದಾನೆ.. ಅಪ್ಪ ಮಕ್ಕಳ ಅಂತರ ಕಡಿಮೆಯಾಗುತ್ತಿದೆ...


ಹಿಂದೆಲ್ಲಾ ವರ್ಷಕ್ಕೊ...ಆರು ತಿಂಗಳಿಗೋ ನಡೆಯುವ ಸಂತೆ, ಜಾತ್ರೆಗೆ ಮಕ್ಕಳನ್ನು ಕರೆದು ಕೊಂಡು ಹೋದರೆ ಎಲ್ಲಿಲ್ಲದ ಸಂತೋಷ. ವರ್ಷಕ್ಕೊಮ್ಮೆ ಬರುವ ಜಾತ್ರೆಗೆ ಹೋಗಲು ಚಾತಕ ಪಕ್ಷಿಗಳಂತೆ ಕಾಯುತ್ತಿರಬೇಕಾಗಿತ್ತು. ಆದ್ರೆ ಇಂದು ವಿಕೇಂಡ್ ಬಂತು ಅಂದರೆ ಸಾಕು ಮಾಲ್. ಸಿನಿಮಾ ಅಂತಾ ಮಕ್ಕಳು ಅಪ್ಪನ ಜೊತೆಗೆ ಹೋಗ್ತಾರೆ. ಮಕ್ಕಳ ಮನಸ್ಸಿನಲ್ಲಿ ಈಗಿನ ಅಪ್ಪ ಎವರೆಸ್ಟಿಗೂ ಎತ್ತರವಾಗಿದ್ದಾನೆ,


ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ...ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈನ ಛಡಿಯೇಟು ತಿಂದ ಅನುಭವವಿಲ್ಲ. ಅಪ್ಪ ಒಬ್ಬ ಫ್ರೆಂಡ್. ಎಲ್ಲಾ ರೀತಿಯ ವಿಷಯಗಳನ್ನು ಷೇರ್ ಮಾಡಿಕೊಳ್ಳಬಲ್ಲ ಗೆಳೆಯ....ಮಕ್ಕಳಿಗೆ ಅಪ್ಪನ ಬಗ್ಗೆ ಭಯವಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗಿದ್ದಾನೆ....ಬದಲಾಗುತ್ತಿದ್ದಾನೆ.


ಎಂ. ಎಂ. ಮಹಾವಿದ್ಯಾಲಯ 


ಬಿ ಎಂ ಭಾವನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ