ಬಡವರ ಪಾಲಿನ ಬಂದು - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಮೇ 17, 2024

ಬಡವರ ಪಾಲಿನ ಬಂದು



ಸರಕಾರಿ ಆಸ್ಪತ್ರೆ ಎಂದರೆ ಬಡಜನಾಂಗದ ಜೀವ ಉಳಿಸುವ ತಾಣ ಎಂದರೆ ತಪ್ಪಿಲ್ಲ. ವೈದ್ಯರು ನಮ್ಮ ಕಣ್ಣಿಗೆ ಸಾಕ್ಷಾತ್ ಶಿವನ ರೂಪದಲ್ಲಿಯೇ ಕಾಣುತ್ತಾರೆ. ಇನ್ನೇನು ಕೆಲ ಕ್ಷಣಗಳಲ್ಲಿ ಇಹಲೋಕವನ್ನು ತ್ಯಜಿಸುವ ವ್ಯಕ್ತಿಯನ್ನು ಮತ್ತೆ ಬದುಕುಳಿಸಿ ಜೀವನವನ್ನು ರೂಪಿಸುವಂತೆ ಮಾಡುವ ಪವಾಡ ಪುರುಷರಾಗಿದ್ದಾರೆ. ಅದೇ ವೈದ್ಯನು ಕೊಂಚ ನಿರ್ಲಕ್ಷ್ಯದಿಂದ ಕೆಲಸ ಮಾಡಿದ್ದಲ್ಲಿ ವ್ಯಕ್ತಿಯ ಜೀವನವನ್ನೇ ಸರ್ವ ನಾಶ ಮಾಡಿ ರೋಗಿಯ ಕಣ್ಣಿಗೆ ಯಮನ ಹಾಗೆ ಕಾಣುವ ಪರಿಸ್ಥಿತಿ ಎದುರಾಗುತ್ತದೆ. ವೈದ್ಯನ ವೃತ್ತಿ ಎನ್ನುವುದು ತುಂಬಾ ಪುಣ್ಯದ ಕೆಲಸವಾಗಿದೆ. ಒಬ್ಬರ ಜೀವವನ್ನು ಉಳಿಸುವುದು ಅಷ್ಟೊಂದು ಸುಲಭದ ಮಾತಲ್ಲ. ವೈದ್ಯನೊಬ್ಬ ಸರಿಯಾಗಿದ್ದರೆ ಸಾಕೆ. ಆಸ್ಪತ್ರೆಯ ಸಿಬ್ಬಂದಿಗಳು ಕೂಡಾ ಸೌಮ್ಯದಿಂದ ನಡೆದರೆ ಉತ್ತಮವಾದದ್ದು.


ಇಂದಿನ ದಿನದಲ್ಲಿ ಸರ್ಕಾರಿ ಆಸ್ಪತ್ರೆ ಸರ್ಕಾರಿ ಆಸ್ತಿ ಎಂದರೆ ಜನರಲ್ಲಿ ತುಂಬಾ ನಿರ್ಲಕ್ಷ್ಯ. ಇಂತಹ ಮನೋಭಾವದಿಂದಲೇ ಸರ್ಕಾರಿ ಆಸ್ಪತ್ರೆ ಎಂದರೆ ಜನರು ಕೀಳಾಗಿ ನೋಡುವುದು. ಆಸ್ಪತ್ರೆಯನ್ನು ನಾವು ಹೇಗೆ ನೋಡುತ್ತೇವೆಯೋ ಹಾಗೆ ಆಸ್ಪತ್ರೆಯು ಕೂಡಾ ನಮ್ಮನ್ನು ಹಾಗೆ ಕಾಣುತ್ತದೆ. ಆಸ್ಪತ್ರೆಯ ಸಿಬ್ಬಂದಿಗಳು ಒಮ್ಮೊಮ್ಮೆ ಮೈ ಮೇಲೆ ಏನೋ ಬಂದ ರೀತಿಯಾಗಿ ಆಡುವುದು ಏಕೆಂದರೆ ದಿನಕ್ಕೆ ಸಾವಿರಾರು ಜನರನ್ನು ನಿರ್ವಹಿಸುವುದು ಕಷ್ಟಕರವಾದ ಸಂಗತಿ. ಅವರ ಪ್ರಶ್ನೆಗೆ ಇವರು ಪ್ರತ್ಯುತ್ತರಿಸಿ ಸಾಕಾಗಿ ಹೋಗಿರುತ್ತದೆ ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬ ತಿರುಗಿ ಹೇಳಿದರೆ ಪಿತ್ತ ನೆತ್ತಿಗೆ ಏರಿದಂತಾಗಿ  ಇಬ್ಬರ ನಡುವೆ ನಡೆಯುವ ಜಗಳಕ್ಕೆ ಆಸ್ಪದ ನೀಡಿದಂತಾಗುತ್ತದೆ.


ಆಸ್ಪತ್ರೆಗೆ ಬರುವ ಒಬ್ಬೊಬ್ಬ ರೋಗಿಯು ಕೂಡಾ ಒಂದೊಂದು ಕಾಯಿಲೆಯಿಂದ ಬಳಲಿ ಬಂದಿರುತ್ತಾರೆ. ಎಲ್ಲಾ ತರಹದ ಕಾಯಿಲೆಗೂ ಕೂಡಾ ಚಿಕಿತ್ಸೆಯನ್ನು ನೀಡುವಲ್ಲಿ ಇವರು ಸೈ ಎನಿಸಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳು ಎಂತಹ ಚಿಕತ್ಸೆಯನ್ನು ನೀಡಿದರು ಕೂಡಾ ಎಲ್ಲವೂ ಉಚಿತವಾಗಿರುವುದರಿಂದ ಬಡವರಲ್ಲಿ ಒಂದು ರೀತಿಯ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಧೈರ್ಯವನ್ನು ಒದಗಿಸುತ್ತದೆ. ಕಟ್ಟಡವನ್ನು ನಿರ್ಮಿಸಿ ಚಿಕಿತ್ಸೆಗೆ ಬೇಕಾದಂತ ಸಲಕರಣೆಗಳನ್ನು ತರಿಸಿ ತಕ್ಕ ವೈದ್ಯರನ್ನು ನೇಮಿಸಿ ಆಸ್ಪತ್ರೆಯಲ್ಲಿ ಎಲ್ಲವನ್ನೂ ನಿರ್ವಹಿಸಿ ರೋಗಿಗೆ ಉಚಿತವಾಗಿ ನೀಡುವುದು ಸುಲಭದ ಮಾತಲ್ಲ. ಕೆಲವೊಂದು ಖಾಸಗಿ ಆಸ್ಪತ್ರೆಗಳು ರೋಗಿಯನ್ನು ಗುಣಪಡಿಸಲು ನಿರ್ಮಿಸಿರಿತ್ತಾರೆಯೋ ಅಥವಾ ಹಣವನ್ನು ಸಂಪಾದಿಸಲು ಒಂದು ಲಾಭದಾಯಕ ವ್ಯವಸ್ಥೆಯನ್ನಾಗಿ ಮಾಡಿಕೊಂಡಿದ್ದಾರೆಯೋ ಎಂದು ತಿಳಿಯುವುದಿಲ್ಲ.


ರೋಗಿಯು ಗುಣಪಡಬೇಕೋ ಅಥವಾ ಅವರು ನೀಡಿರುವಂತಹ ಹಣದ ಪಾವತಿಯನ್ನು ಕಂಡು ಮತ್ತೆ ಯಥಾಸ್ಥಿತಿಗೆ ತೆರಳಬೇಕೋ ಎನ್ನುವುದೇ ಗೋಜಿನ ಸಂಗತಿಯಾಗಿ ಬಿಟ್ಟಿದೆ. ಅಷ್ಟೊಂದು ಗರಿಷ್ಠ ಮಟ್ಟದಲ್ಲಿದ್ದ ಪಾವತಿಯನ್ನು ನೀಡಿದರೆ ಬಡವರು ಪಾವತಿಸುವುದಾದರು ಹೇಗೆ. ಸರಕಾರಿ ಆಸ್ಪತ್ರೆಗಳು ಹಣಕಾಸಿನ ವಿಷಯದಲ್ಲಿ ಬಡವರಿಗೆ ಯಾವುದೇ ರೀತಿಯ ತೊಂದರೆಯಿಲ್ಲದೆ ಗುಣಪಡಿಸಿ ಮನೆಗೆ ಕಳುಹಿಸುತ್ತದೆ. ಕೆಲವೊಂದು ಕಡೆ ಸರ್ಕಾರಿ ಆಸ್ಪತ್ರೆಯನ್ನು ನೋಡಿದರೆ ಅದು ಖಾಸಗಿ ಆಸ್ಪತ್ರೆಯೋ ಅಥವಾ ಸರ್ಕಾರಿ ಆಸ್ಪತ್ರೆಯೋ ಎಂದು ತಿಳಿಯುವುದಿಲ್ಲ ಅಷ್ಟೊಂದು ಸುಂದರವಾಗಿದ್ದು ಬರುವಂತಹ ಪ್ರತಿಯೊಂದು ರೋಗಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿ ಚಿಕಿತ್ಸೆಯನ್ನು ನೀಡುತ್ತಾರೆ.


ಆಸ್ಪತ್ರೆಯನ್ನು ನಾವು ಎಷ್ಟು ಸ್ವಚ್ಚಂದವಾಗಿ ಕಾಪಾಡಿಕೊಳ್ಳುತ್ತೇವೆಯೋ ಅಷ್ಟು ಸುಂದರವಾಗಿರುತ್ತದೆ.  ಇಂತಹ ಆಸ್ಪತ್ರೆಯಲ್ಲೂ ಕೂಡಾ ಕಳಪೆ ಕೆಲಸವನ್ನು ಮಾಡುವ ವ್ಯಕ್ತಿಯನ್ನು ಕೂಡಾ ನಾವು ನೋಡಬಹುದಾಗಿದೆ. ಕೇವಲ ಒಂದು ಶಸ್ತ್ರ ಚಿಕಿತ್ಸೆಯಾಗಬೇಕಾದರೆ ಹೇಳಿಕೊಳ್ಳಲು ಎಲ್ಲವೂ ಕೂಡಾ ಉಚಿತ ಆದರೆ ವೈದ್ಯರ ಬಳಿ ಒಳಗಿಂದೊಳಗೆ ಕೆಲವು ಹಣಕಾಸಿನ ವ್ಯವಹಾರಗಳು ಕೂಡಾ ನಡೆಯುತ್ತಿರುತ್ತದೆ.  ಮುಗ್ಧಮನಸ್ಸಿನ ಭಾವನೆಗಳೇನೆಂದರೆ ಏನೇ ಆಗಲಿ ಗುಣವಾದರೆ ಸಾಕು ಎನ್ನುವ ಭಾವನೆ ಇರುತ್ತದೆ. ಸರ್ಕಾರಿ ಆಸ್ತಿ ಎಂದರೆ ಅದನ್ನು ಮನಸ್ಸಿಗೆ ತಕ್ಕಂತೆ ಬಳಸಿಕೊಳ್ಳುವುದು ಉತ್ತಮ ಮನುಷ್ಯನ ಗುಣವಲ್ಲ. ಸಿಬ್ಬಂದಿಗಳು ಕೂಡಾ ಅಚ್ಚುಕಟ್ಟಾಗಿ ಮನಸಾಕ್ಷಿ ಒಪ್ಪುವಂತೆ ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗಬೇಕು ಎನ್ನುವುದು ಅಭಿಪ್ರಾಯವಾಗಿದೆ.


ಸುದೀಪ ರವಿ ಮಾಳಿ

ಎಂ ಎಂ ಕಾಲೇಜು ಶಿರಸಿ 

ಪತ್ರಿಕೋದ್ಯಮ ವಿಭಾಗo

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ