ಅಕ್ಷರ ಮಾಂತ್ರಿಕ ಎಂದೇ ಕರೆಯಲ್ಪಡುವ ರವಿ ಬೆಳಗೆರೆಯವರ ಬರಹಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿ ಜನಪ್ರಿಯಗೊಂಡ ಕಥೆಯೇ ಹೇಳಿ ಹೋಗು ಕಾರಣ. ಭಾವನಾ ಪ್ರಕಾಶನದ ಅಡಿಯಲ್ಲಿ ಬಿಡುಗಡೆಯಾದ ಈ ಪುಸ್ತಕವು ಸುಮಾರು 339 ಪುಟಗಳನ್ನು ಹೊಂದಿದ್ದು ಸನ್ನಿವೇಶಗಳಲ್ಲಿನ ಸ್ವಾಭಾವಿಕತೆ, ಅನಿರೀಕ್ಷಿತ ತಿರುವುಗಳು,ಅದ್ಭುತ ಪಾತ್ರಗಳು, ಬರವಣಿಗೆಯ ಶೈಲಿಯ ಮೂಲಕ ಹೃದಯವನ್ನು ಕಟ್ಟಿ ಹಾಕುವುದರಲ್ಲಿ ಯಶಸ್ವಿಯಾಗುತ್ತದೆ.
ಕಾದಂಬರಿಯ ಶೀರ್ಷಿಕೆ ನೋಡಿದಾಗ ಇದೊಂದು ಪ್ರೇಮ ಕಥೆ ಎಂದು ಅನ್ನಿಸಿದರೂ ಇದರಲ್ಲಿ ನಮ್ಮ ನಿತ್ಯ ಬದುಕಿನ ಬಹಳಷ್ಟು ಸನ್ನಿವೇಶಗಳ ನೈಜ ರೂಪತೆಯನ್ನು ಎತ್ತಿ ಹಿಡಿಯುತ್ತದೆ.ಚೆನ್ನರಾಯಪಟ್ಟಣದ ಹೆಣ್ಣುಮಗಳೊಬ್ಬಳು ಡಾಕ್ಟರ್ ಆಗುವ ಕನಸನ್ನು ಕಂಡರೆ ಅದಕ್ಕೆ ಹೆಗಲಾಗಿ ನಿಲ್ಲುವವನು ಮಿಠಾಯಿ ಮಾರುವ ಹುಡುಗ.ಪವಿತ್ರ ಪ್ರೇಮದ ಒಂದೊಂದು ಭಾಗವನ್ನು ಓದುತ್ತಾ ಹೋದಂತೆ ನಮಗೆ ಅರಿವಿಲ್ಲದೇ ನಾವು ಆದರ ಪಾತ್ರವಾಗಿ ಕಥೆಯಲ್ಲಿ ಲೀನವಾಗಿ ಹೋಗುತ್ತೇವೆ.
ಕಾದಂಬರಿಯಲ್ಲಿ ಬರುವ ಕಥಾ ನಾಯಕ ಹಿಮವಂತ, ಪ್ರಾರ್ಥನ, ಊರ್ಮಿಳ, ದೇಬಶಿಶು ಚಂದ್ರನಾಥ ಬಂಡೊಪಾಧ್ಯಾಯ ಎಲ್ಲ ಪಾತ್ರಗಳು ಒಂದೊಂದು ರೀತಿಯ ಪಾಠವನ್ನು ಹೇಳಿಕೊಡುತ್ತದೆ. ಆಧುನಿಕ ಜಗದ ಪ್ರೀತಿ, ಪ್ರೇಮ, ದುರಾಸೆ, ಕ್ರೋಧಗಳ ನಡುವೆ ಪವಿತ್ರ ಪ್ರೇಮದ ಕಥೆಯನ್ನು ಕಟ್ಟಿಕೊಟ್ಟ ರವಿ ಬೆಳಗೆರೆಯವರ ಶ್ರದ್ದೆ, ಹಾಗೂ ಶ್ರಮವನ್ನು ಮೆಚ್ಚಲೇಬೇಕು.
"ನನಗೊಂದು ಬದುಕು ಕೊಡುತ್ತೀಯ ಹಿಮವಂತ್? "ಎಂದ ಪ್ರೇಯಸಿಯ ಮಾತಿಗೆ "ಗೊತ್ತಿಲ್ಲ. ಆದರೆ ಬದುಕು ನನಗೆ ಕೊಟ್ಟದ್ದನ್ನೆಲ್ಲ ನಿರ್ವಂಚನೆಯಿಂದ ನಿನಗೆ ಕೊಟ್ಟುಬಿಡಬಲ್ಲೆ "ಎಂಬ ಹಿಮವಂತನ ಮಾತುಗಳು ಎಲ್ಲೋ ಹೃದಯದ ಆಳಕ್ಕೆ ಇಳಿದು ಕಥೆಯ ಕೊನೆಯಲ್ಲಿ ಕಣ್ಣು ಒದ್ದೆಯಾಗುವಂತೆ ಮಾಡುತ್ತದೆ.
ನಿಜವಾಗಿ ಪ್ರೀತಿಸುವ ಹುಡುಗನೊಬ್ಬನ ಮುಗ್ದತೆಯ ಎಳೆಯ ಮೇಲೆ ಸಾಗುವ ಈ ಕಥಾ ಹಂದರವು ಚಂಚಲ ಮನಸಿನ ಹೆಣ್ಣೊಬ್ಬಳ ವ್ಯಕ್ತಿತ್ವದ ಬದಲಾವಣೆಗಳು ಬದುಕಲ್ಲಿ ಹುಟ್ಟಿಸುವ ಸುಳಿಗಳನ್ನು ವಿವರಿಸುತ್ತಾ ಹೋಗುತ್ತದೆ.ತನ್ನ ಪೂರ್ತಿ ಬದುಕನ್ನು ಅವಳ ಕನಸಿಗಾಗಿ ಮುಡಿಫಿಟ್ಟ ಹಿಮವಂತ ಅವಳ ಮೋಸ ನೆನೆದು ಸುರಿಸಿದ ಕಂಬನಿ, ನಂಬಿಕೆ ಸುಳ್ಳಾಗಿ, ಕನಸು ಕರಗಿ, ಪ್ರಾಮಾಣಿಕತೆ ದ್ವೇಷವಾಗಿ ಬದಲಾಗುವಂತಹ ಕೆಟ್ಟ ಸನ್ನಿವೇಶಗಳ ನಡುವೆಯು ಪ್ರೀತಿ ಮುಂದೆ ಎಲ್ಲವು ಸೋತ ಸಂಧರ್ಭವು ಕ್ಷಣಕ್ಕೆ ಹೃದಯ ಭಾರ ಎನಿಸುವಂತೆ ಮಾಡಿದರೂ ಆ ಸನ್ನಿವೇಶದಲ್ಲೂ ಹಿಮವಂತನ ಪ್ರಾಮಾಣಿಕತೆಯ ನೋವು ಓದುಗರ ಎದೆಯಲ್ಲಿ ಮಾತಾಗಿ ಹರಿಯುವುದರಲ್ಲಿ ಸಂಶಯವಿಲ್ಲ.
ನೈಜ ಪ್ರೇಮಕ್ಕೂ, ಪ್ರೀತಿಗೂ ಆರಾಧನೆಗೂ ಇರುವ ಸಣ್ಣ ಕೊಂಡಿಯ ವ್ಯತ್ಯಾಸವನ್ನು ತನ್ನ ಪಾತ್ರಗಳ ಮೂಲಕವೇ ಪರಿಚಯ ಮಾಡಿ ಕೊಡುವ ಇಂತಹ ಬರಹ ಶೈಲಿ ನಿಜಕ್ಕೂ ಅಪರೂಪವಾದದ್ದು.ಈ ಸನ್ನಿವೇಶಗಳು ನಮ್ಮ ಬದುಕಲ್ಲಿ ಬಂದಿದ್ದರೂ ಇಲ್ಲದಿದ್ದರೂ ಪುಸ್ತಕ ಓದಿದವರ ಹೃದಯ ಕಥೆಯ ಕೊನೆಯಲ್ಲಿ ನೋವಿನಲ್ಲಿ ನಡುಗಿ ಹೋದರೂ ಅಚ್ಚರಿ ಇಲ್ಲ.
ಶಿಲ್ಪಾ ಪೂಜಾರಿ
B A 2
ಪತ್ರಿಕೋದ್ಯಮ ವಿಭಾಗ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ