ಈ ಪ್ರಪಂಚವು ಭಗವಂತನ ಒಂದು ಅಪೂರ್ವ ಸೃಷ್ಟಿ ಇಲ್ಲಿ ಜನ್ಮವೆತ್ತುವ ಪ್ರತಿಯೊಬ್ಬ ವ್ಯಕ್ತಿಯ ಪಾಲಿಗೂ ಈ ಜಗತ್ತೊಂದು ರಂಗಭೂಮಿಯಿದ್ದಂತೆ. ಅದರ ಮೇಲೆ ನಾವೆಲ್ಲರೂ ಒಂದೊಂದು ವಿಧದ ಪಾತ್ರಧಾರಿಗಳು ನಾಟಕದ ನಿರ್ದೇಶಕರು ಹೇಳಿದಂತೆ ನಮ್ಮ ನಮ್ಮ ಪಾತ್ರಗಳನ್ನು ನಿರ್ವಹಿಸಬೇಕು ಎಂದು ಕವಿಯೊಬ್ಬರು ಹೇಳುತ್ತಾರೆ.
ಅಂತೆಯೇ ಜನರು ತಮ್ಮ ಬದುಕಿನಲ್ಲಿ ಅನೇಕ ವಿಧದ ಕಾರ್ಯಕಲಾಪಗಳನ್ನು ಮಾಡುತ್ತಾರೆ. ರೈತ ಗದ್ದೆಯಲ್ಲಿ ಬೇಸಾಯ ಮಾಡಿದರೆ, ವ್ಯಾಪಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾನೆ. ಶಿಕ್ಷಕರು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ, ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ವಕೀಲರು ನ್ಯಾಯಾಲಯಗಳಲ್ಲಿ ವಕಾಲತ್ತು ಮಾಡಿದರೆ, ಉದ್ದಿಮೆದಾರರು ತಮ್ಮ ಕಾರ್ಖಾನೆಗಳಲ್ಲಿ ವಿವಿಧ ಬಗೆಯ ಸಾಮಗ್ರಿಗಳ ಉತ್ಪಾದನೆ ನಡೆಸುತ್ತಾರೆ.
ಇಂಥ ಉದ್ಯೋಗ ವಹಿವಾಟುಗಳಲ್ಲಿ ಕೆಲವೊಮ್ಮೆ ಯಶಸ್ಸು ದೊರೆತರೆ, ಕೆಲವೊಮ್ಮೆ ವಿಫಲರಾಗುವುದೂ ಉಂಟು. ಸೋಲು ಗೆಲುವುಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸೋಲು ಬಂದಾಗ ಕುಗ್ಗದೆ ಧೈರ್ಯದಿಂದ ಮುನ್ನಡೆಯುತ್ತಾ, ಭಗವಂತನ ಮೇಲೆ ನಂಬಿಕೆಯಿಟ್ಟು ಸಾಗಿದವರು, ಕೊನೆಗೊಮ್ಮೆ ಗೆಲುವು ಸಾಧಿಸುತ್ತಾರೆ. ಇದಕ್ಕೆ ಜಪಾನ್ ದೇಶದ ಉದ್ಯಮಪತಿಯೊಬ್ಬರು ಉತ್ತಮ ನಿದರ್ಶನವಾಗಿದ್ದಾರೆ.
ಇಂದು ವಿಶ್ವಪ್ರಸಿದ್ದವಾದ ಹೋಂಡಾ ಮೋಟರ್ಸ್ ಸಂಸ್ಥಾಪಕರಾದ ಸೋಯಿ ಶಿರೋ ಹೋಂಡಾ ಅವರು ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಸೋತು ದಿವಾಳಿ ತೆಗೆದಿದ್ದರು. ಅಮೇರಿಕಾದ ಬಾಂಬುಗಳ ಸುರಿಮಳೆ ಮತ್ತು ಭೂಕಂಪದ ಉತ್ಪಾತಗಳಿಂದಾಗಿ ಪತನದಂಚಿಗೆ ತಲುಪಿದ್ದರು. ಆದರೂ ಅವರು ಅಂಜಲಿಲ್ಲ. ಅವರು ತನ್ನ ಸೈಕಲಿಗೆ ಒಂದು ಜಿ.ಇ. ಇಂಜಿನನ್ನು ಜೋಡಿಸಿ ಮೋಟರ್ ಸೈಕಲನ್ನಾಗಿ ಪರಿವರ್ತಿಸಿದರು. ಅದನ್ನು ಕಂಡು ಮರುಳಾದ ಗೆಳೆಯನೊಬ್ಬ ನನಗೂ ಇಂಥದ್ದೇ ಒಂದು ಬೈಕ್ ತಯಾರಿಸಿ ಕೊಡು ಎಂದ. ಹೋಂಡಾರ ಬಳಿ ಹಣವಿರಲಿಲ್ಲ. ತಮ್ಮ ಪತ್ನಿಯ ಆಭರಣಗಳನ್ನು ಮಾರಿ ಬಂದ ಬಂಡವಾಳದಿಂದ ೧೯೪೮ರಲ್ಲಿ ತನ್ನ ಹೋಂಡಾ ಮೋಟರ್ ಸೈಕಲ್ ಕಂಪೆನಿಯನ್ನು ಆರಂಭಿಸಿದರು. ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ. ಯಶಸ್ಸಿನ ಹಾದಿಯಲ್ಲಿ ಸಾಗಿದರು. ಬೈಕಗಳ ಪ್ರಪಂಚದಲ್ಲಿ ಇತಿಹಾಸವನ್ನೇ ನಿರ್ಮಿಸಿದರು.
ಸೋಲು ಬಂದಾಗ ಅಂಜದೆ, ಧೈರ್ಯದಿಂದ ಮುನ್ನುಗ್ಗುವವರನ್ನು ಭಗವಂತನೂ ಮೆಚ್ಚುತ್ತಾನೆ ಹಾಗೂ ಅನುಗ್ರಹಿಸುತ್ತಾನೆ. ಬಂಧು ಬಾಂಧವರೂ, ಗೆಳೆಯರೂ, ಸಮಾಜದ ಇತರ ಸಹೃದಯಿ ನಾಗರಿಕರೂ ಅಂಥವರ ಬೆಂಬಲ ನೀಡುತ್ತಾರೆ.
ಶಾಲಾ ಕಾಲೇಜುಗಳ ಪರೀಕ್ಷೆಯೇ ಇರಲಿ, ಜೀವನದಲ್ಲಿ ಬರುವ ಪರೀಕ್ಷೆಗಳೇ ಇರಲಿ, ಅಪಯಶ, ವೈಫಲ್ಯ, ಪರಾಜಯಗಳನ್ನೆದುರಿಸಬೇಕಾಗಿ ಬಂದಾಗ ಸೋಲಿಗೆ ಅಂಜಬೇಕಾಗಿಲ್ಲ. ಮತ್ತೆ ಮತ್ತೆ ಮನಸ್ಸಿಟ್ಟು, ಶ್ರಮವಹಿಸಿ ಪ್ರಯತ್ನವನ್ನು ನಡೆಸಿದಾಗ ಗೆಲುವು ನಮ್ಮದಾಗುವುದರಲ್ಲಿ ಸಂಶಯವಿಲ್ಲ.
ಸನಾತನ ಎಸ್. ಜಿ.
ಪತ್ರಿಕೋದ್ಯಮ ವಿಭಾಗ.
ಎಂ. ಇ. ಎಸ್. ಶಿರಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ