ನಮ್ಮ ನೋವಿಗೂ ಸ್ಪಂದಿಸುವಿರಾ? - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಜುಲೈ 9, 2022

ನಮ್ಮ ನೋವಿಗೂ ಸ್ಪಂದಿಸುವಿರಾ?

         - ಪಲ್ಲವಿ ಗೌಡ




ಪ್ರಾಣಿಗಳ ಬದುಕು ಹುಟ್ಟುತ್ತಲೇ ಹೋರಾಟದ ಬದುಕು. ಮೂಕ ಪ್ರಾಣಿಗಳ ವೇದನೆಗೆ ಶೇ. 60 ರಷ್ಟು ಜನರು ಸ್ಪಂದಿಸಿದರೆ ಉಳಿದವರು ಹಿಯಾಳಿಸುವುದರಲ್ಲಿಯೇ ಕಾಲ ಕಳೆಯುತ್ತಾರೆ. ನಮ್ಮಂತೆಯೇ ಮೂಕ ಪ್ರಾಣಿಗಳಿಗೂ ಸಹ ಬದುಕಿದೆ  ಎಂಬುದನ್ನು ಅನೇಕ ಜನರು ಮರೆತಂತಿದೆ. ಇಂತಹ ವಿಪರೀತ ಮಳೆ ಹಾಗೂ ಚಳಿಯಲ್ಲಿ ಹೊರಗಡೆ ಓಡಾಡಲೂ ಸಹ ನಮ್ಮಿಂದ ಕಷ್ಟ. ಆದರೆ ಇದೇ ಬಿಸಿಲು, ಮಳೆ, ಚಳಿಯಲ್ಲಿ ಬೀದಿ ನಾಯಿಗಳ ಗತಿ ಏನು ಎಂಬುದನ್ನು ಯೋಚಿಸುವಿರಾ? 

               ಮನೆ ಕಳೆದುಕೊಂಡವರು ಆಶ್ರಮ, ಮಠವನ್ನು ಸೇರಿ ಒಂದು ಸೂರು ಮಾಡಿಕೊಳ್ಳುತ್ತಾರೆ. ನಮಗೆ ಏನಾದರೂ ತಿನ್ನುವ ಬಯಕೆಯಾದಲ್ಲಿ ಅಥವಾ ಹಸಿವಾದಲ್ಲಿ ಯಾರನ್ನಾದರೂ ಕೇಳಿದಾಗ ಅಥವಾ ಖರೀದಿ ಮಾಡಿ ಪಡೆಯುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದಿಸುವವರು ನಮ್ಮವರು ನಮ್ಮ ಜೊತೆಯಲ್ಲಿ ಯಾವಾಗಲೂ ಇರುತ್ತಾರೆ. 

             ಆದರೆ ಮೂಕ ಪ್ರಾಣಿಗಳು, ಬೀದಿ ನಾಯಿಗಳ ಕಷ್ಟ ಕೇಳುವವರಾರು? ಅವುಗಳಿಗೆ ಹಸಿವಾದರೆ ಯಾವುದಾದರೊಂದು ತಿಂಡಿ ಅಂಗಡಿ ಅಥವಾ ಹೋಟೆಲ್ಗಳ ಬಾಗಿಲಿಗೆ ಹೋಗಿ ನಿಲ್ಲುತ್ತವೆ. ಯಾರಾದರೂ ಏನಾದರೂ ತಿನ್ನಲು ಹಾಕಬಹುದು ಎಂಬ ಆಸೆಯಿಂದ. ಬಿಸಿಲು, ಚಳಿ, ಮಳೆಗೆ ಅಸಹಾಯಕರಾಗಿ ರಸ್ತೆ ಬದಿ, ಮನೆಗಳ ಹತ್ತಿರ ಬಂದಾಗ ಒಳ್ಳೆಯ ಮನಸ್ಸಿನಿಂದ ನೋಡುವವರ ಸಂಖ್ಯೆ ಬಹಳ ವಿರಳ. ನಾಯಿಯನ್ನು ಕಂಡರೆ ಕಲ್ಲು ಬಿಸಾಕಿ ಓಡಿಸುವುದೇ ಮಾನವ ಮಾಡುವ ಮೊದಲ ಕೆಲಸ. ಹಸಿವು ತಾಳಲಾರದೆ ಪ್ಲಾಸ್ಟಿಕ್ ತಿಂದ ಹಸುವಿನ ಘಟನೆ ಬಗ್ಗೆ ಹಲವು ಬಾರಿ ಕೇಳಿದ್ದೇವೆ. ಅನಾಥವಾಗಿ ಜೀವ ಬಿಟ್ಟ ಪ್ರಾಣಿಗಳನ್ನು ಕಂಡರೂ ಸಹ ಸುಮ್ಮನಿರುತ್ತೇವೆ. ಅವುಗಳ ಮರಿಗಳು ಮಳೆಯಲ್ಲಿ, ಚಳಿಯಲ್ಲಿ ಊಟವಿಲ್ಲದೇ ನಡುಗುತ್ತಿದ್ದರೂ ಸಹ ಅವುಗಳ ಬಗ್ಗೆ ಕರುಣೆ ಹುಟ್ಟುವುದಿಲ್ಲ ನಮ್ಮ ಹೃದಯದಲ್ಲಿ. 

            ಸಮಯವಿದ್ದಾಗ ಮನೆಯಲ್ಲಿರುವ ಬೇಡವಾದ ಕಂಬಳಿ, ಆಹಾರ ಅಥವಾ ಪ್ರಾಣಿಗೆ ಬೇಕಾಗುವ ಔಷಧ ನೀಡುವ ಕೆಲಸ ಮಾಡಬೇಕು. ರಸ್ತೆಯಲ್ಲಿ ಓಡಾಡುವಾಗ ಅಥವಾ ಬಿಡುವಿನ ಸಮಯದಲ್ಲಿ ರಸ್ತೆಯಲ್ಲಿರುವ ಮೂಕ ಪ್ರಾಣಿಗಳಿಗೆ ತಿಂಡಿ ಹಾಕುವ ಯೋಚನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸಹಾಯ ಮಾಡುವ ಮನಸ್ಸಿದ್ದರೆ ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪವಾದರೂ ಮೂಕ ಪ್ರಾಣಿಗಳಿಗೆ ಮೀಸಲಿಡುತ್ತೇವೆ. ಸಹಾಯ ಮಾಡುವ ಮನಸ್ಸಿರಬೇಕು ಅಷ್ಟೇ. ನಾವು ಮಾಡುವ ಈ ಒಳ್ಳೆಯ ಕಾರ್ಯ ನೋಡಿ ಜನರೂ ಸಹ ಪ್ರೇರಣೆಯನ್ನು ಪಡೆಯುತ್ತಾರೆ. ಬೀದಿಯಲ್ಲಿರುವ ಹಲವಾರು ಪ್ರಾಣಿಗಳು ಅಪಘಾತಗೊಂಡು, ರೋಗದಿಂದ ಬಳಸುವುದನ್ನು ದಿನನಿತ್ಯವೂ ನೋಡಿದರೂ ಸಾಮಾನ್ಯ ಜನರು ತಮಗೆ ಸಂಬಂಧವೇ ಇಲ್ಲದಂತೆ ಮುಂದೆ ಸಾಗುತ್ತಾರೆ. ಆದರೆ ಇಂತಹ ಸಮಯದಲ್ಲಿ ನಮ್ಮ ಕೈಯಲ್ಲಿ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಸಂಬಂಧಪಟ್ಟವರಿಗೆ ತಿಳಿಸಿದರೆ ಅವರೇ ಆ ಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ. 

           ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಜೊತೆ ಫೋಟೋ ಹಾಕುವುದು ಪ್ರೀತಿಯಲ್ಲ. ಅದರ ಕಷ್ಟಕ್ಕೆ ಸ್ಪಂದಿಸುವುದು ನಿಜವಾದ ಪ್ರೀತಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ