ಹಸಿರ ಒಡಲು ಮಲೆನಾಡ ಮಡಿಲು - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಜನವರಿ 18, 2023

ಹಸಿರ ಒಡಲು ಮಲೆನಾಡ ಮಡಿಲು



ಮಲೆನಾಡು "ನಿಸರ್ಗ ರಮಣೀಯತೆಯ ಬೀಡು ಗ್ರಾಮೀಣತೆಯ ಸೊಗಡು". ಮಲೆನಾಡಿನ ಪ್ರಕೃತಿ ಸೌಂದರ್ಯ, ಗ್ರಾಮೀಣ ಜನರ ಸಾಮಾನ್ಯತೆಯಲ್ಲಿ ಅಸಾಮಾನ್ಯವಾದ ಬದುಕು ಬಲು ಸುಂದರ.

ಒಂದು ಮುಂಜಾನೆ ಬೆಟ್ಟದ ತುದಿಯನ್ನೇರಿ ಕೆಳಗೆ ನೋಡಿದರೆ, ಬಾನು ಭುವಿ ಎರಡನ್ನು ಬಿಗಿದಪ್ಪಿ ನಿಂತಿರುವಂತೆ ಗೋಚರಿಸುವ ನಿಶ್ಚಲ,ನಿರ್ಮಲವಾದ ಹಚ್ಚ ಹಸಿರಿನ ಗಿರಿಗಳು.ಮುಗಿಲಿನ ರಥವನ್ನೇರಿ ಮೂಡುತ್ತಿರುವ ದಿನಕರ.ಶ್ವೇತವರ್ಣದಿ ಮುಸುಕಿರುವ ಮುಂಜಾನೆ ಮುಸುಕು.ಗಿರಿಗಳ ನಡುವೆ ಅಲ್ಲೊಂದು ಇಲ್ಲೊದರಂತೆ ವಿಶಾಲವಾಗಿ ಹರಡಿರುವ ಹಂಚಿನ ಮನೆಗಳು. ಮನೆಗಳ ಸುತ್ತ ಸುಂದರವಾದ ವಿವಿಧ ಬಗೆಯ ಹೂ ಗಿಡಗಳಿಂದ ತುಂಬಿರುವ ಕೈತೋಟ ,ಹಲಸಿನ ಮರ ,ಮಾವಿನ ಮರ ,ತೆಂಗಿನ ಮರಗಳ ಸಾಲು.ಹಂಚಿನ ಮಾಡುಗಳ ಮೇಲೆ ಮೇಘಗಳ ಸಾಲಿನಂತೆ ಎದ್ದು ಬರುತ್ತಿರುವ ಹೊಗೆ. ಇನ್ನು ಕೆಂದುಳಿ ಬಣ್ಣದಿಂದ ಕೂಡಿ ಮಣ್ಣಿನ ಹೊಳೆಯೇ ಹರಿಯುತ್ತಿದೆ ಏನು ಎಂಬಂತೆ ಗೋಚರಿಸುವ ಗುಡ್ಡ ಬೆಟ್ಟಗಳನ್ನು ಸೀಳಿ ಹಬ್ಬಿರುವ ದಾರಿ.ಗಗನಕ್ಕೆ ಚುಂಬಿಸುವಂತೆ ಬೆಳೆದಿರುವ ಅಡಿಕೆ ಮರಗಳ ಸಾಲು ತೋಟ.ನಡು ನಡುವೆ ಹಸಿರಾಗಿ ನಿಂತಿರುವ ಬತ್ತದ ಗದ್ದೆಗಳು.ಇನ್ನು ಅಲ್ಲೊಂದು ಇಲ್ಲೊಂದು ರಂತೆ ಕಾಣಸಿಗುವ ಕಬ್ಬಿನ ಗದ್ದೆಗಳು.ಗದ್ದೆಗಳ ನಡುವೆ ಹರಿಯುತ್ತಿರುವ ಸಣ್ಣ ಸಣ್ಣ ತೊರೆಗಳು.ಕೋಳಿ ಕೂಗುವ ಸದ್ದು,ದನ ಎಮ್ಮೆಗಳ ಕೂಗು.ಗಿರಿಧಾಮಗಳ ನಡುವೆ ಹಾರುತ್ತಾ ಕೂಗುತ್ತಿರುವ ಹಕ್ಕಿಗಳ ಇಂಚರ. ಹಸಿರಾದ ಗಿಡಮರಗಳ ಎಲೆಗಳನಾದ. ವಾಹ್!ಒಂದು ಸುಂದರ ಗಂಧರ್ವ ಲೋಕವೇ ಕಣ್ಣೆದುರು ತೆರೆದುಕೊಂಡಿರುವಂತೆ ಎನಿಸುತ್ತದೆ.

ಮಲೆನಾಡಿನ ಸೌಂದರ್ಯ ವರ್ಣಿಸಲು ಪದಗಳ ಕೊರತೆಯಾದರೂ ಆಶ್ಚರ್ಯವೇನಿಲ್ಲ.ಮಲೆನಾಡು, ಬ್ರಹ್ಮನ ಸೃಷ್ಟಿಗೆ ಹೆಚ್ಚಿನ ಮೆರೆಗನ್ನು ನೀಡಿದೆ ಎಂಬುದರಲ್ಲೂ ಎರಡು ಮಾತಿಲ್ಲ.ಇನ್ನು ಮಲೆನಾಡಿಗರ ಬದುಕು ಕೂಡ ಪ್ರಕೃತಿಗೆ ತುಂಬಾ ಸನಿಹವಾದದ್ದು. ಇವರು ಸದಾಕಾಲ ಪ್ರಕೃತಿಯೊಂದಿಗೆ ಹೆಜ್ಜೆ ಹಾಕುತ್ತಿರುತ್ತಾರೆ.ಪ್ರಕೃತಿಯೇ ಅವರ ಬದುಕಿನ ಮುಖ್ಯ ಜೀವಾಳ.

ಮಲೆನಾಡಿಗರ ಕಾಯಕ ಚಕ್ರ ಸದಾ ಪ್ರಕೃತಿಯೊಂದಿಗೆ ತಿರುಗುತ್ತಿರುತ್ತದೆ.ಮಳೆಗಾಲ ಬಂತೆಂದರೆ ಸಾಕು ಉತ್ತ ನೇ ಬಿತ್ತನೆಗಳು ಪ್ರಾರಂಭ. ಜಿಟಿಜಿಟಿ ಸುರಿಯುವ ಮಳೆಯಲ್ಲಿ ಗದ್ದೆ ಕೆಲಸಗಳು ಶುರು. ಸುರಿವ ಜಡಿ ಮಳೆಯಲ್ಲಿ ಕಂಬಳಿ ಕೊಪ್ಪೆಗಳನ್ನು ಹಾಕಿ ಗುದ್ದಲಿ ಹಿಡಿದು ಹೊರಟರೆ  ರೈತನಿಗೆ ಆ ಮಳೆಯೂ ಸಹ ಪುಷ್ಪರುಷ್ಠಿಯೇ. ಟಿಲ್ಲರ್ಗಳು ನೇಗಿಲುಗಳು ಗದ್ದೆಗೆ ಇಳಿಯುತ್ತವೆ. ಭೂತಾಯಿಯ ಒಡಲನ್ನು ಉತ್ತಿ ವ್ಯವಸಾಯ ಮಾಡಲು ಹಸನಾಗಿಸುತ್ತವೆ.ಮೊಳಕೆ ಒಡೆದು ಹಸಿರಾಗಿ ಗದ್ದೆಯು ಉದ್ಯಾನದಂತೆ ಕಂಗೊಳಿಸುತ್ತದೆ.ಗಾಳಿ ಬೀಸುವಾಗ ಅಗೆಯ(ಭತ್ತದ ಸಸಿ) ನಾಟ್ಯ ಆಹಾ! ನೋಡುತ್ತಾ ನಿಂತರೆ ಏನೋ ಮುದ ಆನಂದ.

ಅಗೆಯು ಗಟ್ಟಿಯಾಗಿ ನಾಟಿ ಯೋಗ್ಯವಾದ ಮೇಲೆ ಮಹಿಳಾ ಸಂಘಗಳ ಪಾದಸ್ಪರ್ಶ ಗದ್ದೆಗಳಿಗಾಗುತ್ತದೆ. ಬಣ್ಣ ಬಣ್ಣದ ಕೊಪ್ಪೆಗಳನ್ನು ಧರಿಸಿಕೊಂಡ ನಾರಿ ಮಣಿಗಳ ಓಡಾಟವು ಬಣ್ಣ ಬಣ್ಣದ ಗೊಂಬೆಗಳು ತಿರುಗಾಡುತ್ತಿರುವಂತೆ ಭಾಸವಾಗುತ್ತದೆ. ಹಿಂದೆ ಮುಂದೆ ಕೈ ಹಾಕುತ್ತಾ ಅಗೆ ಕೀಳುವ ದೃಶ್ಯ,ಕೀಳುವಾಗ ಉಂಟಾಗುವ ನೀರಿನ ಜೊರಜೊರ ಸದ್ದು, ಬಳೆಗಳನಾದ ಕಣ್ಣು ಕಿವಿಗೆ ಹಬ್ಬವನ್ನುಂಟು ಮಾಡುತ್ತದೆ.

ಮಾತೆಯರು ಸೇರಿದರೆಂದರೆ ಮಾತಿಗೇನು ಬರವೆ? ಗದ್ದೆ ನೆಟ್ಟಿ ಎಂದರೆ ಅದೊಂತರ"ಮಳೆಗಾಲದ ಅಧಿವೇಶನ" ವಿದ್ದಂತೆಯೇ ಸರಿ. ಪಕ್ಕದ ಮನೆಯಿಂದ ಹಿಡಿದು ಪಂಚಾಯ್ತಿಯವರೆಗಿನ ಎಲ್ಲಾ ವಿಷಯಗಳು ಚರ್ಚೆಯಾಗುತ್ತವೆ.ಡೇರೆ,ಗುಲಾಬಿ,ದಾಸವಾಳ,ಸೇವಂತಿಗೆ ಗಿಡಗಳು ಗದ್ದೆತಿಳಿಯುತ್ತವೆ. 

ಇನ್ನೂ ಮಕ್ಕಳದ್ದು ಇನ್ನೊಂದು ರೀತಿಯ ಕಾರುಬಾರು. ಹೂಡುತ್ತಿರುವ ಟಿಲ್ಲರ್ ಗಳ ಹಿಂದೆ ಹೋಗಿ, ಹಾರಿ ಬಿದ್ದ ಮೀನುಗಳನ್ನು ಆರಿಸಿ ಕೊಟ್ಟೆಗೆತುಂಬುವುದು .ಒಬ್ಬರ ಮೈಗೊಬ್ಬರು ಅರಲೆರೆಚಿಕೊಳ್ಳುವುದು. ಗದ್ದೆಯ ಪಕ್ಕದ ತೊರೆಯಲ್ಲಿ ಬಿದ್ದು ಹೊರಳಾಡುವುದು, ಬಣ್ಣ ಬಣ್ಣದ ಕಲ್ಲುಗಳನ್ನುಜಿ ಬಣ್ಣ ತರಿಸುವುದು. ಒಂದೋ ಎರಡೋ ಗದ್ದೆನೆಟ್ಟಿಯ ಮಜವೇ ಮಜ.

ಗದ್ದೆ ನಾಟಿಯ ವಿಷಯ ಒಂದೆಡೆಯಾದರೆ ಇನ್ನೂ ಕೆಲ ಸಂಗತಿಗಳು ಮಳೆಗಾಲದ ಮೆರಗನ್ನು ಇನ್ನು ಹೆಚ್ಚಿಸುತ್ತವೆ.ಮಳೆಗಾಲ ಪ್ರಾರಂಭವಾದ ತಕ್ಷಣ ಸೋನೆ ಮಳೆಗೆ ನೆಂದು ಮಣ್ಣಿನಿಂದ ಬರುವ ಮಣ್ಣಿನ ಗಮ ಮೂಗಿಗೆ ಏನೋ ಆಹ್ಲಾದ. ಗುಡುಗು ಮಿಂಚುಗಳ ಆರ್ಭಟ ,ಮುಗಿಲಲ್ಲಿ ಕಾರ್ಮೋಡಗಳ ಚಲನವಲನ, ಗದ್ದೆ ಬಯಲುಗಳಲ್ಲಿ ಕಪ್ಪೆಗಳ ವಟರ್ ವಟರ್ ಗಾನ ಸೃಷ್ಟಿಗೆ ಹೊಸ ಮೆರಗನ್ನು ನೀಡುವುದರಲ್ಲಿ ಅನುಮಾನವಿಲ್ಲ. ಇನ್ನು ಮಳೆಗಾಲವೆಂದರೆ ಮಲೆನಾಡಿಗರಿಗೆ ಒಂದು ಹಬ್ಬವೇ ಸರಿ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಹತ್ತು ಮೀನು  ಹಿಡಿಯುವುದು, ಬೇಟರಿ ಕಟ್ಟಿಕೊಂಡು ಬೇಟೆ ಗಿಳಿಯುವವರು ಒಬ್ಬರೋ ಇಬ್ಬರೋ ಸಣ್ಣವರಿಂದ ವೃದ್ಧರವರೆಗೆ ಎಲ್ಲರೂ ಮೀನುಗಾರರೇ.ಗದ್ದೆ ,ಹೊಳೆ,ತೊರೆ ಬಯಲುಗಳೆಲ್ಲ ಮಿಂಚು ಹುಳುಗಳ ಸಂಚಾರದಂತೆ ಭಾಸವಾಗುತ್ತದೆ ಇವರ ಕಾರ್ಯ ವೈಖರಿ.ಇನ್ನೂ ಅಣಬೆ ಹುಡುಕಾಟ ಹುತ್ತಿನ ಅಣಿಬೆ,ಎಣ್ಣೆ ಅಣಬೆ ಹೀಗೆ ತರತರದ ಅಣಬೆಗಳ ಹುಡುಕಾಟದ ನಿಮಿತ್ತದ ಸಂಚಾರ.ಸಾಲು ಸಾಲಾಗಿ ನಿಂತು ಎಡಬಿಡದೆ ಹತ್ತುವ ಉಂಬುಳಗಳ ಕಾಟದ ನಡುವೆಯೂ ಮಳೆನಾಡಿಗರ ವನ್ಯ ಸಂಚಾರ ನಿಲ್ಲದು.

ಇನ್ನು ಚಳಿಗಾಲ ಬಂತೆಂದರೆ ಬಲಿತು ಬಾಗಿನಿಂತ ಭತ್ತದ ಪೈರುಗಳು ನಾ ಕೊಯ್ಲಿಗೆ ಬಂದೆ ಎಂದು ಗಾಳಿಯಲ್ಲಿ ಬಳುಕಿ ಬಳುಕಿ ಹೇಳತೊಡಗುತ್ತವೆ.ಮಳೆಗಾಲದಿಂದ ಬೇಸಿಗೆವರೆಗೂ ಹಂದಿಗಳು, ದನಗಳು ಇತರ ಕಾಡು ಪ್ರಾಣಿಗಳ ಉಪಟಳದಿಂದ ರಕ್ಷಿಸಿ ಸಲಹಿದ ಭತ್ತವನ್ನು ಮನೆ ತುಂಬಿಸಿಕೊಳ್ಳುವ ಸುಸಂದರ್ಭ ಬಂದೇ ಬಿಡುತ್ತದೆ. ಕತ್ತಿಯನ್ನು ಕೈಯಲ್ಲಿ ಹಿಡಿದು ಗದ್ದೆ ಗೆ ಇಳಿದರೆಂದರೆ, ಆ ತೆನೆಗಳ ಮಧ್ಯೆ ಮಾತನಾಡುತ್ತಾ ಜಗದ ಇಹಪರಗಳ ಚಿಂತೆಯೇ ಮರೆಯಾಗಿ ಬಿಡುತ್ತದೆ. ಗದ್ದೆ ಕೊಯ್ಲು ಮಲೆನಾಡಿಗರ ಪಾಲಿಗೆ "ಬೇಸಿಗೆ ಕಾಲದ ಅಧಿವೇಶನ"ವಿದ್ದಂತೆ. ಗದ್ದೆ ಕೊಯ್ದು ಹೊರೆ ಮಾಡಿ, ಕಣಗಳಿಗೆ ಹೊತ್ತು ಬಡಿದು, ಗುಂಪು ಮಾಡಿ,ಬತ್ತ ತೂರಿ ಕಣಜ ಮಾಡಿ ಬತ್ತ ತುಂಬಿ,ಹುಲ್ಲು ವಕ್ಕಿ,ಗೊಣಬೆ ಮಾಡುವಲ್ಲಿಗೆ  ಗದ್ದೆ ಕೊಯ್ಲು ಮುಗಿಯುತ್ತದೆ. 

ಅಬ್ಬಾ! ಗದ್ದೆ ಕೊಯ್ಲು ಮುಗೀತೂ ಅನ್ನೋ ಅಷ್ಟರಲ್ಲಿ ಕೊನೆ ಕೊಯ್ಲು ಆರಂಭವಾಗುತ್ತದೆ. ಕೊನೆ ಗೌಡನ ಹುಡುಕಾಟ ,ಕಾಡಿಬೇಡಿ ಒಪ್ಪಿಸಿ ಅಡಿಕೆ ಕೊಯ್ಲು ಮಾಡುವುದು. ಅಡಿಕೆ ಮರ ಹತ್ತುವುದನ್ನು ನೋಡುವುದು ಒಲಂಪಿಕ್ಸ್ ಸ್ಪರ್ಧೆ ನೋಡುವಷ್ಟೇ ಖುಷಿ. ಇನ್ನು ಕೊಯ್ದ ಕೊನೆಯನ್ನು ಹಗ್ಗಕ್ಕೆ ಸಿಕ್ಕಿಸಿ ಕೆಳಗೆ ಬಿಡುವ ದೃಶ್ಯವಂತೂ ಏರೋಪ್ಲೇನ್ ಅನ್ನು ಲ್ಯಾಂಡ್ ಮಾಡುವ ಮಾಡುವಷ್ಟೇ ಅಸಾಮಾನ್ಯ ದೃಶ್ಯ ಎನಿಸುವುದು. ಇನ್ನೂ ನೆಲಕ್ಕೆ ಬಿದ್ದ ಕೆಂಬಣ್ಣದ,ಹಸಿರು ಬಣ್ಣದ ಉದಿರಡಿಕೆ ಹೆಕ್ಕುವುದು ,ಕೊಯ್ದಿಟ್ಟ ಕೊನೆಗಳನ್ನು ಅಡಿಕೆ ಸುಲಿಯುವ ಸ್ಥಳಗಳಿಗೆ ಸಾಗಿಸುವ ದೃಶ್ಯಗಳು ಕಾಣ ಸಿಗುತ್ತವೆ.

ಇನ್ನು ಅಡಿಕೆ ಸುಲಿಯುವ ಹೆಂಗಸರ "ಚಳಿಗಾಲದ ಅಧಿವೇಶನ" ಪ್ರಾರಂಭ .ಊರಿನ ಎಲ್ಲಾ ವಿಷಯಗಳು ಚರ್ಚೆಯಾಗುವ ಪಂಚಾಯಿತಿ ಕಟ್ಟೆಯಾಗುತ್ತದೆ ಅಡಿಕೆ ಸುಲಿಯುವ ಸ್ಥಳ. ಹಾಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಡಿಕೆ ಸುಲಿಯುವ ಶೈಲಿ.ಇನ್ನೂ ಅಡಿಕೆ ಸುಲಿಯುವಾಗ ಉಂಟಾಗುವ ವಿಭಿನ್ನ ರೀತಿಯ ನಾದವು ಕಿವಿಗೆ ಮಜಾ ನೀಡುತ್ತದೆ. ಅಮ್ಮಂದಿರ ಸೆರಗು ಹಿಡಿದು ಚಳಿಯಲ್ಲಿ ನಡುಗುತ್ತಾ ಚಾ ತಿಂಡಿಗಳಿಗೆ ಕಾಯುತ್ತಾ ಕುಳಿತಿರುವ ಮಕ್ಕಳು ಇನ್ನೊಂದೆಡೆ.

ಅಡಿಕೆ ಬೇಯಿಸುವ ಒಲೆಗೆ ಬೆನ್ನು ಮಾಡಿ ಎಲಿ ಅಡಿಕೆ ಜಗಿಯುತ್ತಾ ಬೇಟೆ,ಮೀನು ಹಿಡಿಯುವುದು ಮುಂತಾದ ಸಾಹಸಮಯ ಕೆಲಸಗಳ ಕುರಿತಾಗಿ ಮಾತಾಡುತ್ತಾ ಕುಳಿತ ಗಂಡಸರದ್ದು ಒಂದು ಗುಂಪು. ಅಡಿಕೆಯನ್ನು ಕೆಂಪು ರಂಗಿನ ತೊಗರು ತುಂಬಿರುವ ಹಂಡೆಯಲ್ಲಿ ಹಾಕಿ ಬೇಯಿಸಿ,ತೆಗೆದು ಬುಟ್ಟಿ ತುಂಬ ಪರಿ ಎಂತು ಬಾಣಸಿಗ ಸಿಹಿಕಾದ್ಯ ಕರೆದು ಬುಟ್ಟಿ ತುಂಬುತ್ತಿರುವಂತೆ ಭಾಸವಾಗುತ್ತದೆ. ಆ ತೊಗರಿನ ಘಮವಂತು ಮೂಗಿಗೆ ಅಪರೂಪದ ಆಹ್ಲಾದ.

ಇನ್ನೂ ಅಡಿಕೆ ಒಣಗಿಸಿ ಗುಂಪು ಮಾಡಿ,ಚೀಲ ತುಂಬಿ, ಅಡಿಕೆ ಮಾರುಕಟ್ಟೆಗೆ ಕಳುಹಿಸುವವರೆಗೂ ಅಡಿಕೆಯದೆ ಕಥೆ.ಅಡಿಕೆ ಬೆಲೆ ಏರಿತಂತೆ,ಇಳಿಯುತಂತೆ, ಗುಮ್ಮ ಏರು ದನಿಯಲ್ಲಿ ಕೂಗಿದೆ ಅಡಿಕೆ ರೇಟು ಹೆಚ್ಚಾಗಬಹುದು ಎಂಬ ಊಹಾಪೋಹಗಳು ಬಾಯಲ್ಲಿ ಸುಳಿದಾಡುವ ಅತಿಥಿಗಳಾಗುತ್ತವೆ. ಅಡಿಕೆ ಕೊಯ್ಲು ಮುಕ್ತಾಯದೊಂದಿಗೆ,ಖಾರುನೆಟ್ಟಿ(ನೀರಾವರಿಜಮೀನಲ್ಲಿ ಮಾಡುವ ಬೇಸಿಗೆ ನೆಟ್ಟಿ)ಆರಂಭಗೊಳ್ಳುತ್ತದೆ.ಮತ್ತೆ ಉತ್ತನೆ,ಬಿತ್ತನೆ,ನೆಟ್ಟಿಗಳು ಶುರುವಾಗುತ್ತವೆ. 

 ಮಲೆನಾಡಿನ ಮಕ್ಕಳ ಪಾಲಿಗಂತೂ ಬೇಸಿಗೆಗಾಲ ಬಂತೆಂದರೆ ಅದೊಂತರ ಕಾಡು ಹಣ್ಣುಗಳ ವಸಂತ ಕಾಲ.ಗುಡ್ಡಗಾಡುಗಳನ್ನು ತಿರುಗಿ ಮುಳ್ಳಣ್ಣು ಎಂಜಲು ಹಣ್ಣು, ಸಂಪಿಗೆ ಹಣ್ಣು, ಬಿಸಿಲು ಬಾಳೆಹಣ್ಣು ನೂರಚೆಲು ಹಣ್ಣು,ಹಲಗೆ ಹಣ್ಣು ಹೀಗೆ ವಿವಿಧ ರೀತಿಯ ಹಣ್ಣುಗಳ ಹುಡುಕಾಟ ಮಲೆನಾಡಿನ ಮಕ್ಕಳ ಪಾಲಿಗೆ ಉತ್ಸಾಹಭರಿತ ಚಾರಣವಾಗುತ್ತದೆ.

ಮಲೆನಾಡಿಗರ ಬದುಕು ಎಡ ಬಿಡುವಿಲ್ಲದೆ ಸಾಗುತ್ತಲೇ ಇರುತ್ತದೆ. ಇವರ ಪಾಲಿಗೆ ಕಾಡುಗಳೇ ಮುಖ್ಯ ಜೀವಾಳವೂ ಹೌದು, ಮನರಂಜನೆಯ ತಾಣಗಳು ಹೌದು.ಸದಾ ಕಾಲ ಸಸ್ಯ ಶ್ಯಾಮಲೆಗಳ ನಡುವೆ ಜೀವನವನ್ನು ಸಾಗಿಸುತ್ತಾ ಸಾಮಾನ್ಯತೆಯಲ್ಲಿ ಅಸಾಮಾನ್ಯವಾದ ಬದುಕನ್ನು ನಡೆಸುತ್ತಿರುತ್ತಾರೆ.


ಅನಿತಾ ಬೀ ಗೌಡ

ಬಿ ಎ ದ್ವಿತೀಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ