ಅಮ್ಮ ಎಂಬ ಅದ್ಭುತ ಪ್ರಪಂಚದೊಳಗೆ.... - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಸೆಪ್ಟೆಂಬರ್ 18, 2024

ಅಮ್ಮ ಎಂಬ ಅದ್ಭುತ ಪ್ರಪಂಚದೊಳಗೆ....


ಅಮ್ಮ ಎಂಬುದು ಎರಡಕ್ಷರದ ಪದವಾದರೂ ಸಾಗರದಷ್ಟು ಭಾವನೆಗಳನ್ನು ತುಂಬಿಕೊಂಡಿರುವ ಶಬ್ದ. ಅಮ್ಮನ ಪ್ರೀತಿ ಆಕಾಶದಲ್ಲಿನ ನಕ್ಷತ್ರಗಳಿಗೆ ಸಮಾನ. ಅವಳ ಪ್ರೀತಿಯನ್ನು ಎಣಿಸಲು ಎಂದಿಗೂ ಸಾಧ್ಯವಿಲ್ಲ. ಎಷ್ಟು ಜನ್ಮ ಬಂದರು ಅಮ್ಮನ ಋಣ ತೀರಿಸಲು ಸಾಧ್ಯವಿಲ್ಲ. ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಮಗುವನ್ನು ಹೊತ್ತುಕೊಂಡು ಏನೇ ಕಷ್ಟ ನೋವು ಬಂದರೂ ಸಹಿಸಿಕೊಂಡು ಜೋಪಾನ ಮಾಡುತ್ತಾಳೆ. ತನ್ನ ಪ್ರಾಣವನ್ನು ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತಾಳೆ. ನಾವು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುವುದನ್ನು ಕಲಿತಾಗ ಆನಂದ ಪಡುತ್ತಾಳೆ ತನ್ನ ಆಯಸ್ಸು ಇರುವವರೆಗೂ ಮಕ್ಕಳ ಒಳಿತಿಗಾಗಿಯೇ ಚಿಂತಿಸುತ್ತಿರುತ್ತಾಳೆ.


ನಾವು ಸಣ್ಣ ವಯಸ್ಸಿನಿಂದ ಬೆಳೆದು ದೊಡ್ಡವರಾಗುವವರೆಗೂ ಪ್ರೀತಿಯಿಂದ ನೋಡುವವಳು. ಗೊತ್ತಿದ್ದೋ ಗೊತ್ತಿಲ್ಲದೇನೋ, ಯಾವುದೇ ತಪ್ಪು ಮಾಡಿದರು ಗದರಿ ಬುದ್ಧಿ ಹೇಳಿ ಸರಿದಾರಿಯಲ್ಲಿ ನಡೆಸುವವಳು ತಾಯಿ ಮಾತ್ರ. ತನ್ನ ಮಗ/ಮಗಳು ಚೆನ್ನಾಗಿ ಓದಿ ಒಳ್ಳೆಯ ಹೆಸರು ಗಳಿಸಬೇಕು ಎಂದು ಪ್ರತಿದಿನ ದೇವರಲ್ಲಿ ಬೇಡುವಳು, ತನಗಾಗಿ ಏನನ್ನು ಬಯಸದೆ ತನ್ನ ಮಕ್ಕಳಿಗಾಗಿ ದುಡಿಯುವಳು, ರುಚಿಕರವಾದ ಊಟ ತಿಂಡಿಗಳನ್ನು ತಯಾರಿಸಿ ತನ್ನ ಮಕ್ಕಳಿಗೆ ಬಡಿಸುವಳು ಕೊನೆಗೆ ತಣಿದು ಉಳಿದಿದ್ದನ್ನು ತಾನು ತಿನ್ನುವವಳು, ಮಗ ರಾಜನಾದರೂ ಸರಿ, ಕಳ್ಳನಾದರೂ ಸರಿ ಜೀವನದುದ್ದಕ್ಕೂ ಪ್ರೀತಿಯಿಂದ ನೋಡುವವಳು, ನಿಸ್ವಾರ್ಥತೆಯಿಂದ ಪ್ರೀತಿ ಕೊಡುವವಳು, ಇವೆಲ್ಲವನ್ನು ತಿಳಿದ ಮೇಲೆ ಕಣ್ಣಿಗೆ ಕಾಣುವ ತ್ಯಾಗಮಯಿ ದೇವರು ತಾಯಿ ಎಂದರೆ ತಪ್ಪಾಗುವುದಿಲ್ಲ.


ಅಮ್ಮ ಎಂಬ ಪದವು ಹಳೆಯ ಧಾರ್ಮಿಕ ಪದವಾಗಿದೆ. ಅಮ್ಮ ಎಂದು ಕರೆಸಿಕೊಳ್ಳುವವರು ತನ್ನ ಮಕ್ಕಳಿಗೋಸ್ಕರ ತ್ಯಾಗ ಮಾಡುವವರು ಹಾಗೂ ಯಾವುದಕ್ಕಾದರೂ ಆದ್ಯತೆ ನೀಡುವ ವ್ಯಕ್ತಿ. ಅಮ್ಮ ಇಡೀ ಜೀವನ ಪೂರ್ತಿ ತನ್ನ ಮಕ್ಕಳ ಯೋಗಕ್ಷೇಮ,ಆರೋಗ್ಯ, ಬೆಳವಣಿಗೆ, ವಿದ್ಯಾಬುದ್ಧಿ ಇವುಗಳ ಬಗ್ಗೆ ಚಿಂತಿಸುತ್ತಿರುತ್ತಾಳೆ. ಹೀಗಾಗಿ ಮಕ್ಕಳಿಗೆ ತಂದೆಗಿಂತ ತಾಯಿಯ ಮೇಲಿರುವ ಪ್ರೀತಿ ಹೆಚ್ಚು. ನಾವು ಹೊರಗಡೆ ಹೋಗಿ ಮರಳಿ ಮನೆಗೆ ಕಾಲಿಟ್ಟ ಕೂಡಲೇ ತಾಯಿ ಕಾಣದಿದ್ದರೆ ಅಪ್ಪನ ಬಳಿ ಅಥವಾ ಅಜ್ಜ-ಅಜ್ಜಿಯರ ಬಳಿ ಕೇಳುವ ಮೊದಲ ಪ್ರಶ್ನೆ ಎಂದರೆ "ಅಮ್ಮ ಎಲ್ಲಿ?"


ಎಲ್ಲರಿಗೂ ತಮ್ಮ ತಂದೆ-ತಾಯಿ ಎಂದರೆ ಪ್ರೀತಿ. ಹಾಗೆಯೇ ನನ್ನ ತಾಯಿಯೇ ನನಗೆ ಸ್ಪೂರ್ತಿ, ನನ್ನ ಜೀವನದ ಉತ್ತಮ ಸ್ನೇಹಿತ, ನನ್ನ ಜೀವನದ ಮಾರ್ಗದರ್ಶಿ, ನಾನೇನಾದರೂ ಗೆದ್ದುಕೊಂಡು ಬಂದಾಗ ನನಗಿಂತ ಹೆಚ್ಚಾಗಿ ಖುಷಿ ಪಡುವವಳು ನನ್ನಮ್ಮ. ನನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ನನ್ನ ಜೊತೆ ನಿಂತು ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಾಳೆ. ಏನೇ ಕಷ್ಟ ಸುಖ ಬಂದರೂ ನನ್ನ ಪಕ್ಕದಲ್ಲಿ ಇರುತ್ತಾಳೆ. ನನ್ನ ತಾಯಿಯೇ ನನಗೆ ಶ್ರೇಷ್ಠ. ಕೇವಲ ನನ್ನ ತಾಯಿ ಮಾತ್ರವಲ್ಲ ಪ್ರಪಂಚದ ಎಲ್ಲಾ ತಾಯಂದಿರು ಶ್ರೇಷ್ಠರೇ. ಆದರೆ ಅವರವರಿಗೆ ಅವರವರ ತಾಯಂದಿರೇ ಶ್ರೇಷ್ಠರು.


ಈ ತಾಯಂದಿರ ದಿನಾಚರಣೆಯನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ನಾವು ಆ ದಿನಕ್ಕೆ ಸೀಮಿತವಾಗಿ ಮಾತ್ರ ವಾಟ್ಸಪ್,ಇನ್ಸ್ಟಾಗ್ರಾಂ ನಲ್ಲಿ ತಾಯಿಯ ಬಗ್ಗೆ ಹುರಿದುಂಬಿಸುತ್ತೇವೆ. ಇದು ಸರಿಯೇ, ಆದರೆ ಪ್ರತಿನಿತ್ಯವೂ ಕೂಡ ತಾಯಿಯ ದಿನವನ್ನು ಆಚರಿಸಬೇಕು. ನನ್ನ ಹೆತ್ತ ತಾಯಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದು ತಾಯಿಯ ಆಶೀರ್ವಾದ ಪಡೆಯುವುದು ನಿತ್ಯವೂ ಮಾಡಬೇಕು. ಒಟ್ಟಿನಲ್ಲಿ ಅಮ್ಮನನ್ನು ದೇವರ ಸ್ಥಾನದಲ್ಲಿ ಕಾಣಬೇಕು. ಏಕೆಂದರೆ ಅವಳು ಕೊಟ್ಟಿರುವ ಪ್ರೀತಿ, ಮಮಕಾರ, ತ್ಯಾಗ ಮತ್ತು ಅವಳ ಋಣವನ್ನು ಕಿಂಚಿತ್ತಾದರೂ ತೀರಿಸಬೇಕಲ್ಲವೇ?


ಆದರೆ ಇಂದಿನ ಮುಂದುವರೆಯುತ್ತಿರುವ ಯುಗದಲ್ಲಿ ಅಮ್ಮನ ಪ್ರೀತಿ ಮಮಕಾರ ಕಾಣುತ್ತಿಲ್ಲ. ತನ್ನ ಮಕ್ಕಳು ಒಳ್ಳೆಯ ಗುಣಮಟ್ಟದ ಶಿಕ್ಷಣ ಪಡೆಯಲಿ ಮುಂದಿನ ದಿನಗಳಲ್ಲಿ ನಮಗೆ ಆಸರೆಯಾಗಲಿ ಎಂದು ವಿದೇಶಕ್ಕೆ ಕಳಿಸುವ ತಾಯಿಗೆ ಕೊನೆಯಲ್ಲಿ ಆಸರೆಯಾಗುವುದು ವೃದ್ಧಾಶ್ರಮ ಹೊರತು ಮಕ್ಕಳಲ್ಲ. ಚಿಕ್ಕ ವಯಸ್ಸಿನಿಂದಲೂ ಒಳ್ಳೆಯ ದಾರಿಯಲ್ಲಿ ಬೆಳೆಸಿ ಸಂಸ್ಕಾರವನ್ನು ಕಲಿಸಿದ ತಾಯಿಯ ಪ್ರೀತಿಗೆ ಬೆಲೆ ಕೊಡದೆ ಅವಳನ್ನು ವೃದ್ದಾಶ್ರಮಕ್ಕೆ ಸೇರಿಸಿ ಮಕ್ಕಳು ವಿದೇಶಕ್ಕೆ ಹೋಗಿಬಿಡುತ್ತಾರೆ. ಇಲ್ಲಿ ತಾಯಿ ತನಗೆ ಮಕ್ಕಳಿದ್ದರೂ ಅವರ ಜೊತೆ ಬದುಕುವ ಅದೃಷ್ಟ ನನಗಿಲ್ಲವಲ್ಲ ಎಂದು ಕೊರಗುತ್ತಾ ಪ್ರತಿನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿರುತ್ತಾಳೆ. ಹೀಗೆ ತಾಯಿಗೆ ಅನಾಥವಾಗಿ ಬಿಟ್ಟುಹೋದ ಮಕ್ಕಳಿಗೆ ಅವಳು ಶಾಪ ಹಾಕಿದರೆ ನಮಗೆ ತಟ್ಟುತ್ತದೆ ಎಂಬ ಪ್ರಜ್ಞೆ ಇರುವುದಿಲ್ಲ.



ಪ್ರಸನ್ನ ಎನ್ ಮರಾಠಿ.

ಪತ್ರಿಕೋದ್ಯಮ ವಿಭಾಗ .

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ,ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ