ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ - ಡಿ. ಸುಮನಾ ಕಿತ್ತೂರ್ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ನವೆಂಬರ್ 10, 2023

ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ - ಡಿ. ಸುಮನಾ ಕಿತ್ತೂರ್


ಭಾರತೀಯ ಚಿತ್ರರಂಗದಲ್ಲಿ ಸುಮನಾ ಕಿತ್ತೂರ್ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಾ ಬಂದಿರುವ ಬಹುಮುಖ ಪ್ರತಿಭೆ.ಒಬ್ಬ ಅತ್ಯುತ್ತಮ ಪತ್ರಕರ್ತೆಯಾಗಿ, ಚಲನಚಿತ್ರ ನಿರ್ದೇಶಕಿಯಾಗಿ , ಗೀತೆ ರಚನಕಾರರಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಇವರು ಇಂದಿಗೂ ತಮ್ಮ ನಿಷ್ಕಲ್ಮಶ ಕಾರ್ಯದ ಮೂಲಕ ಅನೇಕರಿಗೆ  ಸ್ಫೂರ್ತಿ. 


            ಮಹಿಳೆಯರು ಚಿತ್ರರಂಗದಲ್ಲಿ ನಿಲ್ಲುವುದೇ ಕಷ್ಟವೆನಿಸುವ ಸಂದರ್ಭದಲ್ಲಿ ಅತ್ಯುತ್ತಮ ನಿರ್ದೇಶಕಿ ಎಂದು ಜನಮನದಲ್ಲಿ ನೆಲೆಸಿದವರು. ಇವರು ಜನಿಸಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ. ತನ್ನ ವಿದ್ಯಾಭ್ಯಾಸದ ನಂತರ ಬೆಂಗಳೂರು ಎಂಬ ಸಮುದ್ರಕ್ಕೆ ಧುಮುಕಿದ ಇವರು ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಕೆಳಗೆ ಸಹಾಯಕ ನಿರ್ದೇಶಕರಾಗಿ  ಕಾರ್ಯ ನಿರ್ವಹಿಸುತ್ತ ತಮ್ಮ ವೃತ್ತಿ  ಪಯಣವನ್ನು ಶುರು ಮಾಡಿದರು. 

            ವೃತ್ತಿ  ಬದುಕಿನ ಮೊದಲ ಮೆಟ್ಟಿಲಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡರು.   ತಮ್ಮ ವೈಯಕ್ತಿಕ ಬದುಕಿನ ಜಂಜಾಟಗಳ ನಡುವೆಯೂ " ಅರಿವಿಗಾಗಿ ನಿರಂತರ ಹೋರಾಟ ಮಾಡಬೇಕು "ಎಂಬ ತತ್ವವನ್ನು ಅಳವಡಿಸಿಕೊಂಡು "ಆ ದಿನಗಳು "ಚಿತ್ರದ ಮೂಲಕ ನಿರ್ದೇಶಕ ಸಹವರ್ತಿಯಾಗಿ, ಸ್ವತಂತ್ರ  ನಿರ್ದೇಶಕರಾಗಿ "ಸ್ಲಮ್ ಬಾಲ "ಚಿತ್ರದ ಮೂಲಕ ಕರ್ನಾಟಕದಲ್ಲಿ  ತಮ್ಮ ಖ್ಯಾತಿಯನ್ನು ಗಳಿಸಿದರು.ನಂತರದಲ್ಲಿ ಯಶ್ ಅಭಿನಯದ "ಕಳ್ಳರ ಸಂತೆ " ಸಿನಿಮಾವನ್ನು ಕೂಡ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದರು. 

          ಇವರ ನಿರ್ದೇಶನದ "ಎದೆಗಾರಿಕೆ "ಸಿನೆಮಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು.ಕೇವಲ ಭೂಗತ ಲೋಕದ ಸಿನೆಮಾಗಳನ್ನು ಮಾತ್ರವಲ್ಲದೇ ಹಳ್ಳಿ ಸೊಗಡಿನ "ಕಿರುಗೂರಿನ ಗೈಯಾಳಿಗಳು "ಸಿನೆಮಾ ಕೂಡ ಇವರ ಸಾಧನೆಗೆ ಇನ್ನೊಂದು ಗರಿಯನ್ನು ಏರಿಸಿತು.

                   ನಿರ್ದೇಶಕರಾಗಿ ಪರಿಚಿತರಾದ ಹೊಸದರಲ್ಲಿ ಹೆಣ್ಣುಮಗಳಾಗಿ ಇವರಿಗೆ ನಿರ್ದೇಶನ ಸಾಧ್ಯವಾ?  ಎಂಬ ಮಾತುಗಳು, ಅಪಮಾನಗಳು ಕೂಡ ಕೇಳಿ  ಬಂದವು.ಇವುಗಳನ್ನೇ ಸವಾಲಾಗಿ ತೆಗೆದುಕೊಂಡ ಇವರು ತಮ್ಮ ಅದ್ಭುತ ಚಿತ್ರಗಳ ಮೂಲಕ ಹೆಣ್ಣು ಮನಸು ಮಾಡಿದರೆ ಎಲ್ಲವು ಸಾಧ್ಯ ಎಂಬುದನ್ನು ಸಾಬೀತು ಪಡಿಸಿದರು. 

                 ಇವರಿಗೆ ಎರಡು ಭಾರಿ  ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ, ಫಿಲ್ಮ್ಫೇರ್ ಪ್ರಶಸ್ತಿ, ಬೆಂಗಳೂರು ಟೈಮ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಡೈರೆಕ್ಟರ್ ಹೀಗೆ ಅನೇಕ ಪ್ರಶಸ್ತಿಗಳು ಸಂದಿವೆ.ಸಮಾಜ ವಿರೋಧಿ ಅಂಶಗಳೊಂದಿಗೆ ವ್ಯವಹರಿಸುವ ಇವರ ಎಲ್ಲಾ ಸಿನೆಮಾಗಳು ಮನಮೋಹಕ. ಪುರುಷರೇ  ತುಂಬಿರುವ ವೃತ್ತಿ ಜಗತ್ತಿನಲ್ಲಿ ಹೆಣ್ಣು ಮಕ್ಕಳು ಕೂಡ ಸಾಧನೆ ಮಾಡಬಹುದು ಎಂಬುದಕ್ಕೆ ಸುಮನಾ ಕಿತ್ತೂರ್  ಅವರೇ  ಜೀವಂತ ಸಾಕ್ಷಿ.


     ಶಿಲ್ಪಾ ಪೂಜಾರಿ 

ಪತ್ರಿಕೋದ್ಯಮ ವಿಭಾಗ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ.

 ಶಿರಸಿ 

ಊರು :ಜಡ್ಡಿಗದ್ದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ